ಹರಪನಹಳ್ಳಿ, ಡಿ. 29 – ವಿಕಲ ಚೇತನರು ಶಕ್ತಿ ಶಾಲಿಗಳು ಯಾವುದೇ ಸಮಸ್ಯೆ ಬಂದರೂ ಎದೆ ಗುಂದದೆ ಮೆಟ್ಟಿ ನಿಲ್ಲುವ ಅದಮ್ಯ ಚೇತನರು ಎಂದು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕು ಆಡಳಿತ, ತಾ.ಪಂ, ಪುರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಹಾಗೂ ವಿಕಲ ಚೇತನರ ಸಂಘ-ಸಂಸ್ಥೆಗಳ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ವಿಕಲ ಚೇತನರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನನಗೆ ವಿಕಲ ಚೇತನರ ಬಗ್ಗೆ ವಿಶೇಷ ಕಾಳಜಿ ಇದ್ದು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ವಿಕಲ ಚೇತನರ ಜಿಲ್ಲಾ ಕಲ್ಯಾಣಾಧಿಕಾರಿ ಕೃಷ್ಣ ಸಾ. ಬಾಕಳೆ ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನ ವಿಕಲಚೇತನರು ಇಲಾಖೆಯಿಂದ ಅನುಷ್ಠಾನಗೊಳ್ಳುವ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬಿ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಂ.ವಿ. ಅಂಜಿನಪ್ಪ, ಲಾಟಿ ದಾದಾಪೀರ್, ಉದ್ದಾರ ಗಣೇಶ, ಶಾಸಕರ ರಾಜಕೀಯ ಕಾರ್ಯದರ್ಶಿ ಪ್ರದೀಪ್, ಯೋಜನಾಧಿಕಾರಿ ನವೀನ್, ತಾ.ಪಂ. ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ವಿಕಲಚೇತನರ ನೋಡಲ್ ಅಧಿಕಾರಿ ರೇಣುಕಾ, ಎಂಆರ್ಡಬ್ಲ್ಯೂ ಆರ್. ಧನರಾಜ್ ಸೇರಿದಂತೆ ವಿಶೇಷ ಚೇತನರು ಇದ್ದರು.