ಹರಿಹರದಲ್ಲಿ ಶಾಸಕ ಬಿ.ಪಿ. ಹರೀಶ್ ಮತ್ತು ಲೋಕೋಪಯೋಗಿ ಇಲಾಖೆ ಇಇ ನಡುವೆ ಮಾತಿನ ಚಕಮಕಿ
ಹರಿಹರ, ಡಿ. 9- ಇಲ್ಲಿನ ತುಂಗಭದ್ರಾ ಸೇತುವೆ ಸಮೀಪದ ಬೀರೂರು-ಸಮ್ಮಸಗಿ ಹೆದ್ದಾರಿ ಕಾಮಗಾರಿ ವಿವಾದಕ್ಕೆ ಶನಿವಾರ ಒಂದು ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ಈಡೇರಲಿಲ್ಲ. ಶಾಸಕ ಬಿ.ಪಿ.ಹರೀಶ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿ ಮಧ್ಯೆ ಮಾತಿನ ಚಕಮಕಿ ವಾಹನ ಸವಾರರು ಇನ್ನಷ್ಟು ಸಂಕಷ್ಟ ಎದುರಿಸಬೇಕೆಂಬ ಸಂದೇಶ ನೀಡಿತು.
ಮಧ್ಯಾಹ್ನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಹರೀಶ್ ಅವರು ಕಂದಾಯ, ಭೂ ಮಾಪನ ಇಲಾಖೆ, ನಗರಸಭೆ ಹಾಗೂ ಲೋಕೋಪಯೋಗಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದರು.
ಸಭೆಯಲ್ಲೇ ಶಾಸಕರು ಮತ್ತು ಲೋಕೋಪಯೋಗಿ ಇಇ ನರೇಂದ್ರಬಾಬು ನಡುವೆ ಮಾತಿನ ವಿನಿಮಯ ನಡೆಯಿತು. ನಂತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಳತೆ ಮಾಡಿಸ ತೊಡಗಿದರು. ಈ ವೇಳೆ ನರೇಂದ್ರ ಬಾಬು ಸಿಬ್ಬಂದಿಗಳಿಗೆ ಹಳೆ ಸೇತುವೆಯ ಮಾದರಿಯಲ್ಲಿ ಆಳತೆ ಮಾಡುವಂತೆ ಸೂಚಿದರು. ಇದರಿಂದ ಸಿಟ್ಟಿಗೆದ್ದ ಬಿ.ಪಿ.ಹರೀಶ್ ರವರು, ಹಳೆ ಸೇತುವೆ ಶಿಥಿಲಗೊಂಡಿದ್ದು, ಹೊಸ ಸೇತುವೆ ಮೇಲೆಯೇ ಎಲ್ಲಾ ವಾಹನ ಸಂಚಾರವಿರುವುದರಿಂದ ಅದನ್ನಾಧರಿಸಿಯೇ ರಸ್ತೆ ನಿರ್ಮಿಸಬೇಕಿದೆ ಎಂದರು.
ಆಗ ಇಇ ನರೇಂದ್ರ ಬಾಬು ದರ್ಗಾ ಮುಂದೆ ಲೋಕೋಪಯೋಗಿ ಇಲಾಖೆಗೆ ಸೇರಿದ ಸಾಕಷ್ಟು ಜಾಗ ಇರುವುದರಿಂದ ಅದನ್ನು ಬಳಸಿ ರಸ್ತೆ ನಿರ್ಮಿಸಬಹುದಾಗಿದೆ ಎಂದರು.
ನಂತರ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು ರಸ್ತೆ ಮಾಡಲು ನನ್ನ ವಿರೋಧವಿಲ್ಲ, ಆದರೆ ಇದರ ಬಗ್ಗೆ ಮಾಹಿತಿ ಕೊರತೆಯಿರುವ ಅಧಿಕಾರಿಗಳಿಂದ ಒತ್ತಡ ಹಾಕಿ ದುರಸ್ತಿ ಮಾಡಿಸುತ್ತಿರುವುದರ ಹಿಂದೆ ದೊಡ್ಡ ಷಡ್ಯಂತ್ರ್ಯವಿದೆ ಎಂದು ಆರೋಪಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದಾಗ ಒಪ್ಪಿದ ಅವರು ಶಾಸಕರ ಸಲಹೆಯಂತೆ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಇಇ ಸೂಚಿಸಿದರು. ನಂತರ ನರೇಂದ್ರ ಬಾಬು ಮಾತನಾಡಿ, ನಾನೆ ಖುದ್ದಾಗಿ ನಿಮ್ಮ ಬಳಿ ಮಾತನಾಡುತ್ತೇನೆ. ನಂತರ ಪ್ರಕರಣ ಕುರಿತು ನಿರ್ಣಯಿಸೋಣ ಸಾರ್ ಎಂದರು.
ಕ್ಷೇತ್ರದಲ್ಲಿ ನಾನು ಇಲ್ಲದ ಸಂದರ್ಭವನ್ನು ಬಳಸಿಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾ ದರೆ ನಾನು ಸದನದಲ್ಲಿ ನಿಮ್ಮ ವಿರುದ್ದ ಹಕ್ಕು ಚ್ಯುತಿ ಮಂಡಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸು ತ್ತೇನೆ ಎಂದು ಶಾಸಕರು ಎಚ್ಚರಿಕೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ದರ್ಗಾ ಮುಂಭಾಗ ರಸ್ತೆಯ ಸಂಪೂರ್ಣ ದಾಖಲೆ ಪರೀಶಿಲನೆ ಮಾಡಿದ್ದೇನೆ. ಅಲ್ಲದೇ, ಸರ್ವೇ ಮಾಹಿತಿ ನನ್ನ ಬಳಿಯಿದೆ. ಹಳೆ ಸೇತುವೆ ಆಧರಿಸಿ ರಸ್ತೆ ನಿರ್ಮಾಣ ಮಾಡಿದರೆ ಎಲ್ಲರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಹೊಸ ಸೇತುವೆಗೆ ನೇರ ರಸ್ತೆ ನಿರ್ಮಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದೆನೆ, ಇದಕ್ಕೊಪ್ಪದಿದ್ದರೆ ನಿಯಮಾವಳಿ ಪ್ರಕಾರ ಈ ಭಾಗದಲ್ಲಿ 150 ಅಡಿ ರಸ್ತೆ ನಿರ್ಮಿಸಬೇಕಾಗುತ್ತದೆ ಎಂದರು.
ತಹಸೀಲ್ದಾರ್ ಗುರು ಬಸವರಾಜ್, ಪೌರಾಯುಕ್ತ ಐ.ಬಸವರಾಜ್, ಸಿಪಿಐ ದೇವಾನಂದ, ಲೋಕೋಪಯೋಗಿ ಇಲಾಖೆ ಎಇಇ ಶಿವಮೂರ್ತಿ, ನಗರಸಭೆ ಹಾಗೂ ಸರ್ವೇಇಲಾಖೆಯ ಅಧಿಕಾರಿಗಳು ಮತ್ತು ನಗರಸಭೆಯ ಸಿಬ್ಬಂದಿಗಳು ಸ್ಥಳದಲ್ಲಿದ್ದರು.