ಹರಿಹರ, ಸೆ.5- ಚಿಕ್ಕಮಗಳೂರಿನಲ್ಲಿ ವಕೀಲರ ಸಂಘದ ಅಧ್ಯಕ್ಷರು ಮತ್ತು ಇತರೆ ಸದಸ್ಯರ ಮೇಲೆ ದಾಖಲಾಗಿರುವ ಸುಳ್ಳು ದೂರುಗಳನ್ನು ವಾಪಸ್ ಪಡೆಯಬೇಕು ಹಾಗೂ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ತಹಶೀಲ್ದಾರ್ಗೆ ಇಂದು ಮನವಿ ಸಲ್ಲಿಸಲಾಯಿತು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಪಿ. ರುದ್ರಗೌಡ ಮಾತನಾಡಿ, ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯರಾದ ಪ್ರೀತಮ್ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪೊಲೀಸ್ ಠಾಣೆಯಲ್ಲಿ ತೀವ್ರ ತೆರನಾದ ಹಲ್ಲೆ ನಡೆಸಿದ್ದು, ಈ ಕೃತ್ಯವನ್ನು ಎಸಗಿದ ಪೊಲೀಸ್ ಸಿಬ್ಬಂದಿಗಳ ಮೇಲೆ ಕೂಡಲೇ ಕಾನೂನು ಕ್ರಮಗಳನ್ನು ಕೈಗೊಂಡು ಅವರನ್ನು ಖಾಯಂ ಆಗಿ ಕೆಲಸದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಸಾಕಮ್ಮ, ಗಣೇಶ ಕೆ. ದುರ್ಗದ್, ಹಾಲಪ್ಪ, ಬಾಲಾಜಿ ಸಿಂಗ್, ಬಿ. ನಾಗರಾಜ್, ಆನಂದ್, ಮಾರುತಿ ಬೇಡರ್, ಅಬ್ದುಲ್ ರೆಹಮಾನ್ ಬಾಷಾ, ಕೆ.ವಿ. ನಾಗರಾಜ್, ಪ್ರಕಾಶ್ ಬಿ.ಸಿ., ಮಹಾದೇವಯ್ಯ, ಸಿ.ಜಿ. ಉಮೇಶ್ ಹುಲ್ಮನಿ, ಅರುಣ್ ಕುಮಾರ್, ಬಿ.ಹೆಚ್. ಚೆನ್ನಪ್ಪ, ಸಾಕಮ್ಮ, ಶುಭಾ, ವಿರಾನಾ, ರೇಷ್ಮಾ ಎಂ.ಎಸ್. ವನಜಾಕ್ಷಿ ಪಾಟೀಲ್, ಚೇತನಾ ಆನಂದ್, ಕೆ. ರಾಜಶೇಖರ್, ಶಿವಕುಮಾರ್, ಸಾವಿತ್ರ ಚೌಡಪ್ಪ, ಸುರೇಶ್ ಹಣಿಗಿ ಹಾಗು ಇತರರು ಹಾಜರಿದ್ದರು.
ಕ್ಷಮೆಯಾಚನೆ : ವಕೀಲರು ಮನವಿ ಅರ್ಪಿಸುವ ಸಮಯದಲ್ಲಿ ತಹಶೀಲ್ದಾರ್ ಬಸವರಾಜಯ್ಯ ಕಚೇರಿಯಲ್ಲಿ ಇದ್ದರೂ ಸಹ ಬೇಗನೆ ಹೊರಗೆ ಬಂದು ಮನವಿ ಪತ್ರ ಸ್ವೀಕರಿಸುವಲ್ಲಿ ವಿಳಂಬ ಮಾಡಿದ್ದರಿಂದ, ವಕೀಲರು ತಹಶೀಲ್ದಾರ್ ವಿರುದ್ಧವೂ ಘೋಷಣೆ ಕೂಗಿ, ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಿಕ್ಕೆ ಮುಂದಾಗಿದ್ದರಿಂದ ಆಗ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪ್ರತಿಭಟನೆ ನಿರತರಾಗಿದ್ದ ವಕೀಲರಿಗೆ ಕ್ಷಮೆಯಾಚಿಸಿ, ಮನವಿಯನ್ನು ಸ್ವೀಕರಿಸಿದ ಘಟನೆ ನಡೆಯಿತು.
ತಡ ಮಾಡಿದ ಪರಿಣಾಮ : ಸಾರ್ವಜನಿಕರು ಯಾವುದೇ ರೀತಿಯ ಹೋರಾಟ ಮಾಡಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ, ಸರ್ಕಾರಕ್ಕೆ ಮನವಿ ಅರ್ಪಿಸುವ ಪದ್ದತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಕಚೇರಿಯಲ್ಲಿ ಇದ್ದರೂ ಸಹ ಹೊರಗಡೆ ಬಂದು ಮನವಿ ಸ್ವೀಕರಿಸುವಲ್ಲಿ ತಡ ಮಾಡಿದ ಪರಿಣಾಮವಾಗಿ ತಹಶೀಲ್ದಾರ್ ಬಸವರಾಜಯ್ಯ ವಿರುದ್ಧ ಘೋಷಣೆ ಕೂಗಿ ರಸ್ತೆ ಬಂದ್ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಯಿತು ಎಂದು ವಕೀಲರ ಸಂಘದ ಅಧ್ಯಕ್ಷ ಪಿ. ರುದ್ರಗೌಡ ಹಾಗೂ ವಕೀಲ ಆನಂದ್ ಹಾಲಪ್ಪ ತಿಳಿಸಿದರು.
ತಹಶೀಲ್ದಾರ್ ಸ್ಪಷ್ಟನೆ : ಮನವಿ ಸಲ್ಲಿಸಲು ವಕೀಲರ ಸಂಘದವರು ಕಚೇರಿಗೆ ಬಂದಾಗ ಜಿಲ್ಲಾಧಿಕಾರಿಗಳು ಮಧ್ಯಾಹ್ನ ವಿ.ಸಿ. ಮೀಟಿಂಗ್ ಕರೆದ ಪ್ರಯುಕ್ತ, ನಮ್ಮ ಇಲಾಖೆಯ ಸಿಬ್ಬಂದಿಗಳ ಸಭೆಯನ್ನು ಕರೆದು ಅವರ ಜೊತೆಗೆ ಚರ್ಚೆ ಮಾಡುತ್ತಾ, ಆ ವಿಚಾರಕ್ಕೆ ಸಂಬಂಧಿಸಿದಂತೆ ಪೂರ್ವ ತಯಾರಿ ನಡೆಸುವಾಗ ಹೊರಗಡೆ ಬಂದು ಮನವಿ ಸ್ವೀಕರಿಸಲು ತಡವಾಯಿತು ಎಂದು ಹೇಳಿದರು.