ದಾವಣಗೆರೆ, ಡಿ. 5 – ಸದೃಢ ಆರೋಗ್ಯ ಪಡೆಯಲು ಯೋಗಾಭ್ಯಾಸ ಒಂದೇ ಮಾರ್ಗವಾಗಿದ್ದು, ವಯಸ್ಸಿನ ಮಿತಿಯಿಲ್ಲದೇ ಪ್ರತಿಯೊಬ್ಬರು ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಯೋಗ ಗುರು ಎನ್.ಪರಶುರಾಮಪ್ಪ ಕಿವಿಮಾತು ಹೇಳಿದರು.
ನಗರದ ಎಸ್‌ಎಎಸ್‌ಎಸ್ ಯೋಗ ಫೆಡರೇಷನ್ ಕೇಂದ್ರದಲ್ಲಿ ನಿನ್ನೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಯೋಗಾಭ್ಯಾಸ ಮಾಡಿದರೆ, ಜೀವನೋತ್ಸಹ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ, ಮನುಷ್ಯನ ಜಂಜಾಟದ ಜೀವನದಲ್ಲಿ ಸದಾ ಲವಲವಿಕೆಯಿಂದಿರಲು ಯೋಗ ಮದ್ದಾಗಿದೆ ಎಂದು ಸಲಹೆ ನೀಡಿದರು.
ಯೋಗ ಈಗ ಅಂತರರಾಷ್ಟ್ರೀಯ ಕ್ರೀಡಾ ಸ್ಥಾನಮಾನ ಹೊಂದಿದ್ದು, ಪ್ರತಿಯೊಬ್ಬರೂ ಯೋಗ ಕರಗತ ಮಾಡಿಕೊಂಡು, ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆಯುವ ಜೊತೆಗೆ ಅತ್ಯುತ್ತಮ ಕ್ರೀಡಾಪಟುಗಳಾಗಿ ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದು ಯೋಗ ಪಟುಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭಗಳಲ್ಲಿ ಎಸ್ ಎಎಸ್ ಎಸ್ ಯೋಗ ಫೆಡರೇಷನ್ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಸ್.ಪಿ.ಗೀತಾ, ಮಹಾನಗರ ಪಾಲಿಕೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ ರಾಗಿರುವ ಲಾವಣ್ಯ ಶ್ರೀಧರ್, ರಾಜ್ಯ ಮಟ್ಟದ ಡಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕುಮಾರಿ ಅನುಷ್ಕಾ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಗ ಫೆಡರೇಷನ್‌ನ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಎಂ.ಎನ್.ಗೋಪಾಲ್ ಸ್ವಾಮಿ, ಗುರುಸ್ವಾಮಿ, ಖಜಾಂಚಿ ಎಸ್.ರಾಜಶೇಖರ್, ನಿರ್ದೇಶಕರಾದ ಪಿ.ಅಜ್ಜಯ್ಯ, ರಾಘವೇಂದ್ರ ಎನ್.ಚೌವ್ಹಾಣ್ ಸೇರಿದಂತೆ, ಇನ್ನಿತರರಿದ್ದರು.