ಜಿಗಳಿಯ ಎನ್ನೆಸ್ಸೆಸ್ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಡಾ. ಅಪೂರ್ವ ಕಿವಿಮಾತು
ಮಲೇಬೆನ್ನೂರು, ಡಿ.4- ವಿದ್ಯಾರ್ಥಿಗಳು ದುಶ್ಚಟಗಳ ಜೊತೆಗೆ ಮೊಬೈಲ್ ಬಳಕೆಯಿಂ ದಲೂ ದೂರವಿದ್ದಷ್ಟು ಒಳ್ಳೆಯದೆಂದು ಮಲೇಬೆನ್ನೂರಿನ ಅಪೂರ್ವ ಆಸ್ಪತ್ರೆಯ ವೈದ್ಯ ಡಾ. ಅಪೂರ್ವ ಅಭಿಪ್ರಾಯಪಟ್ಟರು.
ಅವರು, ಸೋಮವಾರ ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ಶಿಬಿರದ 3ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ದುಶ್ಚಟಗಳಾದ ಮದ್ಯಪಾನ, ಗುಟ್ಕಾ, ತಂಬಾಕು, ಸಿಗರೇಟ್ ಇವುಗಳ ಕಡೆಗೆ ತಿರುಗಿಯೂ ನೋಡಬೇಡಿ. ಮೊಬೈಲ್ ಬಳಕೆಗೆ ಮಿತಿ ಇರಲಿ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬಳಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜನ್ಮ ನೀಡಿದ ತಂದೆ-ತಾಯಿಗಳಿಗೆ, ಶಿಕ್ಷಣ ಕಲಿಸಿದ ಗುರುಗಳಿಗೆ ಖುಷಿ ಆಗುವಂತಹ ಒಳ್ಳೆಯ ಕೆಲಸಗಳನ್ನು ಮಾಡುವುದರ ಜೊತೆಗೆ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬೇಕೆಂದು ಅವರು ಕರೆ ನೀಡಿದರು.
ಗ್ರಾಮದ ವೈದ್ಯ ಹಾಗೂ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಡಾ. ಎನ್.ನಾಗರಾಜ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಲ್ಲಿ ವಿಶೇಷ ಗುಣಗಳಿರುತ್ತವೆ. ತಂದೆ-ತಾಯಿಗಳು ಕಷ್ಟಪಟ್ಟು ನಿಮ್ಮನ್ನು ಚೆನ್ನಾಗಿ ಓದಿಸುತ್ತಾರೆ. ಆದರೆ, ಅನೇಕರು ಕೆಲಸ ಸಿಕ್ಕ ನಂತೆ ತಂದೆ-ತಾಯಿಗಳನ್ನು ಊರಿನಲ್ಲೇ ಬಿಟ್ಟು ನಗರ ಅಥವಾ ವಿದೇಶಗಳಿಗೆ ಹೋಗುತ್ತಾರೆ. ತಂದೆ-ತಾಯಿಗಳನ್ನು ನಿಮ್ಮನ್ನು ಓದಿಸಿದ ತಪ್ಪಿಗಾಗಿ ಅನಾಥರಂತೆ ಬದುಕುವಂತೆ ಮಾಡಬೇಡಿ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ
ಡಾ. ಗೌರಮ್ಮ ಮಾತನಾಡಿ, ದೇಶದ
ಬಗೆಗೆ ಕಾಳಜಿ ಮೂಡಿಸುವ ವಿಶೇಷ ಶಿಬಿರ ಇದಾಗಿದೆ ಎಂದರು.
ಪ್ರಗತಿಪರ ರೈತ ಹೊಳೆಸಿರಿಗೆರೆಯ ಕುಂದೂರು ಮಂಜಪ್ಪ ಮಾತನಾಡಿ, ಏನೇ 3ಜಿ, 4ಜಿ, 5ಜಿ ಬಂದರೂ ಹಸಿದವರಿಗೆ ಗಂಜಿ ಕೊಡುವವರು ರೈತರು ಮಾತ್ರ. ಅಂತಹ ರೈತರನ್ನು ಗೌರವದಿಂದ ಕಾಣುವ ಕೆಲಸ ಆಗಬೇಕು. ನಾಟಕ ಮಾಡಿ, ಕಣ್ಣೀರನ್ನು ತರಿಸಬಹುದು. ಆದರೆ, ಬೆವರು ಕಷ್ಟಪಟ್ಟರೆ ಮಾತ್ರ ಬರುತ್ತದೆ. ಅಂತಹ ಶ್ರಮಿಕ ವರ್ಗಗಳ ಮತ್ತು ದೇಶ ಕಾಯುವ ಸೈನಿಕರ ಕಷ್ಟವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದರು.
ಪಿಎಸಿಎಸ್ ನಿರ್ದೇಶಕ ಸಿ.ಎನ್.ಪರಮೇಶ್ವರಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಎಕ್ಕೆಗೊಂದಿ ರುದ್ರಗೌಡ, ಜಿ.ಪಿ.ಹನುಮಗೌಡ, ಕುಂಬಳೂರಿನ ಕೆ.ಕಾಮರಾಜ್ ಮಾತನಾಡಿದರು.
ಜಿಗಳಿ ಪಿಎಸಿಎಸ್ ಅಧ್ಯಕ್ಷ ಬಿ.ಎಸ್.ಕುಬೇರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಂ.ದೇವೇಂದ್ರಪ್ಪ, ಎಂ.ವಿ.ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಬಿ.ಪ್ರಭಾಕರ್, ಬಾಲಕೇಂದ್ರದ ಅಧ್ಯಕ್ಷ ಜಿ.ಆರ್.ಚಂದ್ರಪ್ಪ, ಶಿಕ್ಷಕರಾದ ದೊಡ್ಮನಿ ಶಿವಕುಮಾರ್, ಜಿ.ಆರ್.ನಾಗರಾಜ್, ಬಿ.ರವೀಂದ್ರಚಾರಿ, ಬಿ.ಸೋಮಶೇಖರಚಾರಿ, ಬೆಣ್ಣೇರ ನಂದ್ಯೆಪ್ಪ, ಕೆ.ಸಿ.ಬಸವರಾಜ್, ಪತ್ರಕರ್ತ ಪ್ರಕಾಶ್, ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಡಾ.ಬಿ.ಕೆ.ಮಂಜುನಾಥ್, ಡಾ. ಸಿ.ಚಂದ್ರಶೇಖರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.