ಭಾರತಕ್ಕೊಂದು ಶ್ರೇಷ್ಠ ಸಂವಿಧಾನ ರೂಪಿಸಿದ ಕೀರ್ತಿಯ ಸಿಂಹಪಾಲು ವಕೀಲ ವೃತ್ತಿಗೆ ಸಲ್ಲುತ್ತದೆ

ಭಾರತಕ್ಕೊಂದು ಶ್ರೇಷ್ಠ ಸಂವಿಧಾನ ರೂಪಿಸಿದ ಕೀರ್ತಿಯ ಸಿಂಹಪಾಲು ವಕೀಲ ವೃತ್ತಿಗೆ ಸಲ್ಲುತ್ತದೆ

ಹರಪನಹಳ್ಳಿ : ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‌ ನ್ಯಾಯಧೀಶರಾದ ಎಂ.ಭಾರತಿ

ಹರಪನಹಳ್ಳಿ, ಡಿ.4- ಜಗತ್ತಿನ ಬಹುತೇಕ ತತ್ವ, ಸಿದ್ಧಾಂತ, ಹಕ್ಕು ಮತ್ತು ಕರ್ತವ್ಯಗಳ ಆಳವಾದ ಅಧ್ಯಯನ ನಡೆಸಿ ಸ್ವತಂತ್ರ ಭಾರತಕ್ಕೊಂದು ಶ್ರೇಷ್ಠ ಸಂವಿಧಾನ ರೂಪಿಸಿದ ಕೀರ್ತಿಯ ಸಿಂಹಪಾಲು ವಕೀಲ ವೃತ್ತಿಗೆ ಸಲ್ಲುತ್ತದೆ ಎಂದು ಹಿರಿಯ ಸಿವಿಲ್‌ ನ್ಯಾಯಧೀಶರಾದ ಎಂ.ಭಾರತಿ ಹೇಳಿದರು.

ಪಟ್ಟಣದ ವಕೀಲರ ಸಂಘದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ `ವಕೀಲರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ವಹಿಸಿದ ನಾಯಕತ್ವ, ಸಮನ್ವಯತೆ ಹಾಗೂ ಸಹಬಾಳ್ವೆ ಅಜರಾಮರ. ಇಂದು ನಾವು ನೋಡುತ್ತಿರುವ ಸರ್ವವ್ಯಾಪಿ, ಸರ್ವ ಕಾನೂನುಗಳ ಮೂಲ ಅಥವಾ ತಾಯಿ ನಮ್ಮ ಸಂವಿಧಾನ. ಈ ಸಂವಿಧಾನವನ್ನು ಕಾಲಕಾಲಕ್ಕೆ ಸೂಕ್ತವಾಗಿ ವ್ಯಾಖ್ಯಾನ ಮಾಡುತ್ತಿರುವುದು ವಕೀಲರೇ. ಸಾಂವಿಧಾನಿಕ ಪೀಠಗಳನ್ನು ಅಲಂಕರಿಸಿ ಸಮರ್ಪಕ ತೀರ್ಪುಗಳನ್ನು ನೀಡುವವರು ಕೂಡ ಮೂಲತಃ ವಕೀಲರೇ ಆಗಿರುತ್ತಾರೆ. ಹಾಗಾಗಿ ವಕೀಲರ ವಿಶೇಷವಾದ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಕೊಡುಗೆ ಮತ್ತು ಜವಾಬ್ದಾರಿಗಳ ಅವಲೋಕನಕ್ಕಾಗಿ ಮತ್ತು ಭಾರತದ  ರಾಜೇಂದ್ರಪ್ರಸಾದ್ ಅವರ ಜನ್ಮ ದಿನದ ಸವಿನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 3ನ್ನು ವಕೀಲರ ದಿನವಾಗಿ ಆಚರಿಸಲಾಗುತ್ತದೆ ಎಂದರು.

ಕಿರಿಯ ಸಿವಿಲ್ ನ್ಯಾಯಾಧೀಶರಾದ ಪಕ್ಕಿರವ್ವ ಕೆಳಗೇರಿ ಮಾತನಾಡಿ,  ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ನಾಯಕತ್ವ ವಹಿಸಿದ್ದ ನಾಯಕರನ್ನು ಗಮನಿಸಿದರೆ, ಬಹುತೇಕರು ವಕೀಲರಾಗಿದ್ದರು ಅಥವಾ ಕಾನೂನಿನ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು ಎಂಬುದು ವಿಶೇಷ. ಗಾಂಧೀಜಿ, ಲಾಲಾ ಲಜಪತ್ ರಾಯ್, ಬಾಬು ರಾಜೇಂದ್ರಪ್ರಸಾದ್, ಸರ್ದಾರ್ ವಲ್ಲಭಭಾಯ್ ಪಟೇಲ್, ದಾದಾಭಾಯಿ ನವರೋಜಿ, ಸುರೇಂದ್ರನಾಥ ಬ್ಯಾನರ್ಜಿ, ಮದನಮೋಹನ ಮಾಳವೀಯ, ಮೋತಿಲಾಲ್ ನೆಹರು, ಲೋಕಮಾನ್ಯ ಬಾಲಗಂಗಾಧರ ತಿಲಕ್, ಸಿ. ರಾಜಗೋಪಾಲಾಚಾರಿ, ಸಿ.ಆರ್.ದಾಸ್, ಬುಲಾಭಾಯಿ ದೇಸಾಯಿ, ಅಸಫ್ ಅಲಿ, ಗೋವಿಂದ ವಲ್ಲಭ ಪಂತ್, ಕೈಲಾಶ್ ನಾಥ್ ಕಟ್ಜು ಹೀಗೆ ಹಲವರ ನಿದರ್ಶನ ನೀಡಬಹುದು  ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಸಮಾಜದ ಡೊಂಕನ್ನು ತಿದ್ದುವಲ್ಲಿ ವಕೀಲರ ಪಾತ್ರ ಮಹತ್ವದ್ದು. ಸಾಮಾಜಿಕ ಸುಧಾರಣೆಗಳನ್ನು ತರಲು ಮತ್ತು ಪಿಡುಗುಗಳನ್ನು ಕೊನೆಗಾಣಿಸಲು ಮಹತ್ವದ ಪಾತ್ರ ವಹಿಸಬೇಕಾಗುತ್ತದೆ. ಕಾಲಕಾಲಕ್ಕೆ ಜನಪರ ಹೋರಾಟ, ಚಳವಳಿಗಳಿಗೆ ನಾಯಕತ್ವ ನೀಡುವುದು ಮಾತ್ರವಲ್ಲದೆ ನ್ಯಾಯಾಲಯಗಳಲ್ಲಿ ದೀನ, ದಲಿತ, ಶೋಷಿತ, ಅಸಂಘಟಿತ ವರ್ಗ ಕ್ಷೇತ್ರಗಳ ಹಕ್ಕುಗಳಿಗಾಗಿ, ಅಭಿವೃದ್ಧಿಗಾಗಿ ನ್ಯಾಯಯುತ ಹೋರಾಟ ಮಾಡಬೇಕಾದದ್ದು ವಕೀಲರೇ. ವಕೀಲರನ್ನು ‘ಸಾಮಾಜಿಕ ಇಂಜಿನಿಯರ್‌ಗಳು’ ಎಂದೂ ಕರೆಯುವುದುಂಟು. ಏಕೆಂದರೆ ದೇಶದ ಸಮಗ್ರ ಅಭಿವೃದ್ಧಿ, ಮೂಲಭೂತ ಸೌಕರ್ಯಗಳನ್ನು ಜನಮಾನಸಕ್ಕೆ ತಲುಪಿಸುವಂತೆ ಮಾಡುವುದಲ್ಲದೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇತ್ಯಾದಿಗಳಿಂದ ಸಮಾಜವನ್ನು ಮುಕ್ತಗೊಳಿಸಲು ಬಹುಪಾಲು ಹೋರಾಟ ವಕೀಲರದ್ದೇ. ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ ಜನರು ಎಲ್ಲ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡಾಗ ನ್ಯಾಯಾಲಯದ ಕದ ತಟ್ಟುವಲ್ಲಿ ಹಾಗೂ ಜಾಗೃತಿ ಮೂಡಿಸುವಲ್ಲಿ ವಕೀಲರ ಪಾತ್ರವನ್ನು ಮರೆಯುವಂತಿಲ್ಲ ಎಂದರು.

ಹಿರಿಯ ವಕೀಲರಾದ ಬಿ.ಕೃಷ್ಣಮೂರ್ತಿ  ಮಾತನಾಡಿ, ಸದಾ ಅಧ್ಯಯನಶೀಲರಾಗಿ ಇರುವಂಥ ವೃತ್ತಿ ಎಂದರೆ ಅದು ವಕೀಲ ವೃತ್ತಿ. ಪ್ರತಿದಿನ, ಪ್ರತಿಕ್ಷಣ ಹೊಸ ವಿಚಾರ, ವಿಷಯ ಹಾಗೂ ಅನುಭವಗಳನ್ನು ಪಡೆಯುತ್ತಾ ಹೋಗುವ ವೃತ್ತಿ  ವಕೀಲ ವೃತ್ತಿಯಾಗಿದೆ. ವೃತ್ತಿಗೆ ಹೊಸದಾಗಿ ಬರುವ ಯುವ ವಕೀಲರುಗಳಿಗೆ ಸೂಕ್ತ ಮಾರ್ಗದರ್ಶನ, ಅವಕಾಶ, ಪ್ರೋತ್ಸಾಹ ನೀಡುವ ಜವಾಬ್ದಾರಿ ಹಿರಿಯರದ್ದಾಗಿದ್ದರೆ, ಗೌರವ, ಶ್ರದ್ಧೆಯಿಂದ ಹಿರಿಯರ ಸಲಹೆ, ಸಹಕಾರಗಳನ್ನು ಪಾಲಿಸುವುದು ಕಿರಿಯರ ಜವಾಬ್ದಾರಿ. ತಮಗೆ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿ ಕೊಂಡು ವೃತ್ತಿಯಲ್ಲಿ ಬೆಳೆಯುವುದರೊಂದಿಗೆ ಘನತೆ, ಗೌರವ ಸಂಪಾದಿಸುವುದು ಮುಖ್ಯ. ಅಂದಿನಿಂದ ಇಂದಿನವರೆಗೂ ಸಮಾಜಕ್ಕೆ ನಾಯಕತ್ವ ಕೊಡುತ್ತಾ ಬಂದಿರುವ ಕಾನೂನು ಕ್ಷೇತ್ರ ನಿಜಕ್ಕೂ ಮಹತ್ತರವಾದುದು ಎಂದರು.

ಇದೇ ವೇಳೆ ವಕೀಲರಾದ ಬಿ.ಕೃಷ್ಣಮೂರ್ತಿ.ಪಿ.ಜಗದೀಶಗೌಡ, ಚಿಗಟೇರಿ ವೀರಣ್ಣ, ಕೇಶವಮೂರ್ತಿ ಅವರನ್ನು  ವಕೀಲರ ಸಂಘದಿಂದ ಸನ್ಮಾನಿಸಲಾಯಿತು.

ಈ ವೇಳೆ ಅಪರ ಸರ್ಕಾರಿ ವಕೀಲ  ವಿ.ಜಿ.ಪ್ರಕಾಶಗೌಡ, ಸರ್ಕಾರಿ ಅಭಿಯೋಜಕರಾದ ನಿರ್ಮಲ, ಸಹಾಯಕ ಸರ್ಕಾರಿ ಅಭಿಯೋಜಕ ಮೀನಾಕ್ಷಿ, ವಕೀಲರ  ಸಂಘದ ಉಪಾಧ್ಯಕ್ಷರಾದ  ಕೆ.ವಿರೂಪಾಕ್ಷಪ್ಪ, ಕಾರ್ಯದರ್ಶಿ ಕೆ.ಆನಂದ, ಜಂಟಿ‌ ಕಾರ್ಯದರ್ಶಿ ಹೂಲೆಪ್ಪ, ವಕೀಲರಾದ ಬಿ.ಹಾಲೇಶ್, ಎಸ್.ಎಂ.ರುದ್ರಮುನಿ ಸ್ವಾಮಿ,  ಕೆ.ಪ್ರಕಾಶ, ಬಿ.ಗೋಣಿಬಸಪ್ಪ, ಎಂ.ಮೃತ್ಯುಂಜಯ, ರೇಣುಕಾ ಮೇಟಿ, ಮಲ್ಲಮ್ಮ, ಜೆ.ಸೀಮಾ, ರಾಜಪ್ಪ, ಗುಡಿಬಿಂದು ಮಾಧವ, ಕೆ.ನಾಗರಾಜ, ಮುತ್ತಿಗಿ ರೇವಣಸಿದ್ದಪ್ಪ, ಬಿ.ಗೋಣಿಬಸಪ್ಪ, ಜಿಟ್ಟಿನಕಟ್ಟಿ ಮಂಜುನಾಥ ಸೇರಿದಂತೆ ಇತರರು ಇದ್ದರು.

error: Content is protected !!