ಜಿಲ್ಲೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅಭಿಯಾನದಡಿ ಒಂದು ದಿನ ನಿಗದಿ ಮಾಡಿ ನೊಂದಣಿಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸೂಚನೆ
ದಾವಣಗೆರೆ, ಡಿ. 4 – ಜಿಲ್ಲೆಯಲ್ಲಿನ ಜನನ ಹಾಗೂ ಮರಣ ನೋಂದಣಿಯನ್ನು ಕಡ್ಡಾಯ ವಾಗಿ ಇ-ಜನ್ಮ ತಂತ್ರಾಂಶದಲ್ಲಿ ದಾಖಲಿಸಬೇಕು, ನೊಂದಣಿಗೆ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅಭಿಯಾನದಡಿ ಒಂದು ದಿನ ನಿಗದಿ ಮಾಡಿ ನೊಂದಣಿಗೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೊನ್ನೆ ನಡೆದ ಜಿಲ್ಲಾ ಮಟ್ಟದ ನಾಗರೀಕ ನೋಂದಣಿ ಪದ್ಧತಿ ಹಾಗೂ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ 2023 ರ ಸಾಲಿನ ಜನವರಿಯಿಂದ ಅಕ್ಟೋಬರ್ ವರೆಗೆ ಜನನ ಅಂಕಿ ಅಂಶದಲ್ಲಿ 12601 ಗಂಡು, 11830 ಹೆಣ್ಣು ಸೇರಿ 24998 ಜನನ ಪ್ರಕರಣಗಳಿವೆ. ಮರಣ ಪ್ರಕರಣಗಳಲ್ಲಿ ಇದೇ ಅವಧಿಯಲ್ಲಿ 7951 ಗಂಡು, 5678 ಹೆಣ್ಣು ಸೇರಿ 13629 ಮರಣ ಪ್ರಕರಣಗಳು ಜಿಲ್ಲೆಯಲ್ಲಿ ಜರುಗಿದೆ. ಜನನ ಹಾಗೂ ಮರಣಗಳ ಅಂಕಿ ಅಂಶಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ನೋಂದಾಯಿಸಲಾಗಿದ್ದು, 2015 ರಿಂದ 2021 ರ ವರೆಗೆ 3689 ಜನನ ಪ್ರಕರಣಗಳು, 1427 ಮರಣದ ಪ್ರಕರಣಗಳು ಸೇರಿ 5116 ನೋಂದಣಿಯಾಗದ ಪ್ರಕಾರಣಗಳನ್ನು
ಶೀಘ್ರವೇ ಅಭಿಯಾನದ ಮೂಲಕ ಇತ್ಯರ್ಥ ಮಾಡಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಗೆ ಅಧಿಕಾರಿಗಳು ಕ್ರಮ ವಹಿಸಬೇಕು.
ಗ್ರಾಮೀಣ ಪ್ರದೇಶದಲ್ಲಿ ಗ್ರಾಮಲೆಕ್ಕಿಗರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಜನನ, ಮರಣ ನೊಂದಣಿ ಪ್ರಾಧಿಕಾರವಾಗಿದ್ದು ನಗರ, ಪಟ್ಟಣ ಪ್ರದೇಶದಲ್ಲಿ ಮುಖ್ಯಾಧಿಕಾರಿ, ಆಯುಕ್ತರು ಪ್ರಾಧಿಕಾರವಾಗಿರುತ್ತಾರೆ.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೂ ತೆರಳಿ ಜನನ, ಮರಣದ ಸಂಪೂರ್ಣ ಮಾಹಿತಿಯನ್ನು ಪಡೆದು ನೋಂದಣಿ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಿ ನೂರರಷ್ಟು ಗುರಿ ಸಾಧಿಸಬೇಕು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮರಣ ಹೊಂದಿದವರ ಮರಣ ಪ್ರಮಾಣ ಪತ್ರ ಪಡೆಯಲು 4 ಮತ್ತು 4.ಎ ಅರ್ಜಿಯನ್ನು ಭರ್ತಿ ಮಾಡಿ, ವೈದ್ಯಕೀಯ ಪ್ರಮಾಣ ಪತ್ರ ಪಡೆದು ಇ-ಜನ್ಮ ತಂತ್ರಾಂಶದಲ್ಲಿ ನೋಂದಾಯಿಸಬೇಕು. ಜನನ-ಮರಣ ದರ; 2022 ರಲ್ಲಿ ಜನನ ಮತ್ತು ಮರಣ ದರ 1000 ಕ್ಕೆ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 11.61, ನಗರ ಪ್ರದೇಶದಲ್ಲಿ 22.52 ಸೇರಿದಂತೆ ಒಟ್ಟು ಜನನ ದರ 15.30 ಹಾಗೂ ಮರಣ ದರ ಗ್ರಾಮೀಣ 7.71, ನಗರ ಪ್ರದೇಶ 7.55 ಸೇರಿ ಒಟ್ಟು 7.66 ರಷ್ಟಿದ್ದು, ಗ್ರಾಮೀಣ ಭಾಗದಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ನೋಂದಣಿ ಕುರಿತಂತೆ ಜನರಲ್ಲಿ ಅರಿವು ಮೂಡಿಸಿ ಕೂಲಂಕುಶವಾಗಿ ಪರಿಶೀಲನೆ ನಡೆಸಿ, ಜನನ ಹಾಗೂ ಮರಣ ಪ್ರಮಾಣ ಪತ್ರಗಳು ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 916 ನೊಂದಣಿ ಘಟಕಗಳು, ನಗರ ಪ್ರದೇಶದಲ್ಲಿ 20 ಸೇರಿದಂತೆ ಒಟ್ಟು 936 ನೊಂದಣಿ ಘಟಕಗಳಿರುತ್ತವೆ.
ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ವಾಗಿ ಹಾನಿಯಾಗಿದ್ದು, ವಿಮಾ ಕಂಪನಿಗಳು ರೈತರಿಗೆ ಗೊಂದಲಕ್ಕೆ ಎಡೆಮಾಡಿಕೊಡದೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗ್ರಾಮ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮೀಕ್ಷೆ ನಡೆಸಿ ರೈತರ ಬಳಿ ಮೂಲ ದಾಖಲೆಗಳನ್ನು ಪಡೆದು ಪರಿಶೀಲಿಸಿಬೇಕು ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನೀಲಾ ಎಸ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್, ಜಿಲ್ಲಾ ಕೃಷ್ಟ ರೋಗ ನಿರ್ಮೂಲನಾಧಿಕಾರಿ ಡಾ. ಮಂಜುನಾಥ್ ಪಾಟೀಲ್ ಉಪಸ್ಥಿತರಿದ್ದರು.