ದಾವಣಗೆರೆಯ ಕ್ರಿಕೆಟ್ ಹಬ್ಬಕ್ಕೆ ತೆರೆ
ದಾವಣಗೆರೆ, ಡಿ.4- ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿ ನೆನಪಿನ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಹಬ್ಬಕ್ಕೆ ಸೋಮವಾರ ಬೆಳಗಿನ ಜಾವ 3 ಗಂಟೆಗೆ ತೆರೆ ಬಿದ್ದಿತ್ತು.
ಫ್ರೆಂಡ್ಸ್ ಬೆಂಗಳೂರು ಮತ್ತು ಉಡುಪಿಯ ಇಜಾನ್ ಸ್ಫೋರ್ಟ್ಸ್ ಮಧ್ಯೆ ನಡೆದ ಪಂದ್ಯದಲ್ಲಿ ಫ್ರೆಂಡ್ಸ್ ಬೆಂಗಳೂರು ಗೆಲುವು ಸಾಧಿಸುವ ಮೂಲಕ 5,00,000 ರೂ. ನಗದು ಮತ್ತು ಆಕರ್ಷಕ ಟ್ರೋಪಿಯನ್ನು ಪಡೆಯಿತು. ಫ್ರೆಂಡ್ಸ್ ಬೆಂಗಳೂರು ವಿರುದ್ಧ ಸೋಲನ್ನುಭವಿಸಿದ ಉಡುಪಿಯ ಇಜಾನ್ ಸ್ಫೋರ್ಟ್ಸ್ ತಂಡವು 3,55,000 ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು.
ಟಾಸ್ ಗೆದ್ದು ಫಿಲ್ಡಿಂಗ್ಗೆ ಇಳಿದ ಫ್ರೆಂಡ್ಸ್ ಬೆಂಗಳೂರು, ಇಜಾನ್ ಸ್ಫೋರ್ಟ್ಸ್ ಕ್ಲಬ್ ಅನ್ನು ನಾಲ್ಕು ವಿಕೆಟ್ ಪಡೆದು, 48 ರನ್ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಇದನ್ನು ಬೆನ್ನಟ್ಟಿದ ಫ್ರೆಂಡ್ಸ್ ಬೆಂಗಳೂರಿನ ಆಟಗಾರರು, ಆರಂಭದಲ್ಲಿ ಉತ್ತಮ ಆಟಗಾರರ ವಿಕೆಟ್ ಕಳೆದುಕೊಂಡು ಆಘಾತಕಾರಿ ಸ್ಥಿತಿಯಲ್ಲಿ ಕಂಡುಬಂದಿತ್ತು. ನಂತರ ಚೇತರಿಸಿಕೊಂಡ ಫ್ರೆಂಡ್ಸ್ ಬೆಂಗಳೂರು ತಂಡ 7 ವಿಕಟ್ ನಷ್ಟಕ್ಕೆ 51 ರನ್ ಗಳಿಸುವ ಮೂಲಕ ವಿಜಯಿ ಆಯಿತು.
ಈ ಪಂದ್ಯವನ್ನು ಸುಮಾರು 25 ಸಾವಿರಕ್ಕೂ ಹೆಚ್ಚು ಕ್ರೀಡಾಭಿಮಾನಿಗಳು ವೀಕ್ಷಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬಹುಮಾನ ವಿತರಣೆ ಮಾಡಿದರು.
ಬಹುಮಾನ ವಿತರಣೆ ಸಮಾರಂಭದಲ್ಲಿ ಆಯೋಜಕರಾದ ಶಿವಗಂಗಾ ಶ್ರೀನಿವಾಸ್, ರಾಜು ರೆಡ್ಡಿ, ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ, ನಿಖಿಲ್ ಶೆಟ್ಟಿ, ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ್ ಸೇರಿದಂತೆ ಕ್ರೀಡಾಭಿಮಾನಿಗಳು ಹಾಜರಿದ್ದರು.