ಹಾಲಸ್ವಾಮಿ ಗವಿಮಠದ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್
ಚನ್ನಗಿರಿ, ಡಿ. 3 – ಆಧುನಿಕತೆ ಬೆಳೆದಂತೆ ನಮ್ಮೊಳಗಿನ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಭಕ್ತಿ, ಶ್ರದ್ಧೆ, ಕಾಯಕ ತತ್ವಗಳಲ್ಲಿನ ಉತ್ತಮ ಗುಣ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಆದರ್ಶ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಮುಂದಾಗುವಂತೆ ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಕರೆ ನೀಡಿದರು.
ಅವರು ಬಸವಾಪಟ್ಟಣ ಗ್ರಾಮದ ಹಾಲಸ್ವಾಮಿ ಗವಿಮಠದಲ್ಲಿನ 51 ನೇ ಇಷ್ಟಲಿಂಗ ಶಿವಯೋಗಾನು ಷ್ಟಾನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಠಗಳು ಜಾತಿ, ಮತ ಭೇದವಿಲ್ಲದೆ ಸಮಾನತೆಯ ದೃಷ್ಟಿಯಲ್ಲಿ ಸರ್ವರಿಗೂ ಲೇಸನ್ನು ಬಯಸುವಂತಹ ಉತ್ತಮ ಸೇವಾಕಾರ್ಯಗಳನ್ನು ಮಾಡುತ್ತಿದ್ದು, ಆಧುನಿಕತೆ ಬೆಳೆದಂತೆ ಮರೆಯಾಗು ತ್ತಿರುವ ಸಾಮಾಜಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿವೆ ಎಂದು ಶ್ಲ್ಯಾಘಿಸಿದರು.
ನಮ್ಮ ಸಂಸ್ಕೃತಿ ಸಂಪ್ರದಾಯಗಳ ಆಶಯಗಳನ್ನು ಸಾಮಾಜಿಕ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿ, ಗುರುಪರಂಪರೆ, ಶಿಕ್ಷಣ ಮತ್ತು ಸಾಮಾಜಿಕ ಮೌಲ್ಯಗಳನ್ನು ಕಲಿಸಿಕೊಡುವಲ್ಲಿ ಮಠಗಳು ಮತ್ತು ಸ್ವಾಮೀಜಿಗಳ ಪಾತ್ರ ಬಹುಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯಲವಟ್ಟಿಯ ಸಿದ್ದಾರೂಢ ಮಠದ ಯೋಗಾನಂದ ಶ್ರೀಗಳು ಮಾತನಾಡಿ, ಮಠಗಳು ಸಾಮಾಜಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಂತಹ ಶ್ರದ್ಧಾ ಕೇಂದ್ರಗಳಾಗಿದ್ದು, ಪ್ರತಿಯೊಬ್ಬರೂ ಮಠಗಳ-ಸಾಧು ಸಂತರ ಒಡನಾಟದೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನದ ಸಾರ್ಥಕತೆ ಸಾಧ್ಯ ಎಂದು ಹೇಳಿದರು.
ಜಾತಿ-ಜಾತಿಗಳ ಹಾಗೂ ಧರ್ಮ-ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ನಾವು ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಶಾಂತಿ ಮತ್ತು ನೆಮ್ಮದಿಯ ಕೇಂದ್ರಗಳಂತಿರುವ ಮಠಗಳನ್ನು ಉನ್ನತ ಮಟ್ಟಕ್ಕೆ ಬೆಳೆಸುವಂತಹ ಮಹತ್ವದ ಕಾರ್ಯವನ್ನು ಮಾಡಬೇಕಿದೆ ಎಂದರು.
ಗವಿಮಠದ ಶಿವಕುಮಾರ ಹಾಲಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಡಿ.ಉಮೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೈ.ಪಿ.ಮಹಾದೇವಪ್ಪ, ಹೊನ್ನಾಳಿ ಕರವೇ ಅಧ್ಯಕ್ಷ ಶ್ರೀನಿವಾಸ, ಮಠದ ಧರ್ಮದರ್ಶಿ ಕೆ.ವೀರಯ್ಯ, ಹರೋಸಾಗರದ ಮಂಜಣ್ಣ,ರಾಜಶೇಖರ್, ಶಿಕ್ಷಕರಾದ ಆರ್, ಅಶೋಕ್, ಕೆ.ಟಿ.ನರೇಂದ್ರಕುಮಾರ್ ಮತ್ತಿತರರು ಇದ್ದರು.