ಹೊನ್ನಾಳಿಯಲ್ಲಿನ `ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ಡಾ. ಧನಂಜಯ ಬಿ.ಜಿ
ಹೊನ್ನಾಳಿ,ನ.28- ಭಾರತೀಯ ಸಂವಿಧಾನ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಇದನ್ನು ರಚಿಸಿದ ಕೀರ್ತಿ `ಭಾರತ ರತ್ನ’ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಸಲ್ಲಬೇಕು. ಸಮಸ್ತ ಭಾರತೀಯರು ಸಂವಿಧಾನದ ರಕ್ಷಣೆಯಲ್ಲಿ ಧೈರ್ಯ ದಿಂದ ಹಾಗೂ ಸ್ವತಂತ್ರವಾಗಿ ಜೀವಿಸುತ್ತಿದ್ದಾರೆ. ಕಳೆದ ಸುಮಾರು ಏಳು ದಶಕಗಳಿಂದ ಸಂವಿಧಾನ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯ ಮೂಲಕ ಜನಾದೇಶ ಪಡೆದುಕೊಂಡು ದೇಶವನ್ನು ಮುನ್ನಡೆಸಲಾಗುತ್ತಿದೆ ಎಂದು ಪ್ರಾಂಶುಪಾಲ ಡಾ. ಧನಂಜಯ ಬಿ.ಜಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಯುವ ರೆಡ್ಕ್ರಾಸ್ ಘಟಕ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ `ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆ ಬೋಧಿಸಿ ಅವರು ಮಾತನಾಡಿದರು.
ಸಮಸ್ತ ಭಾರತೀಯರು ಸಂವಿಧಾನವನ್ನು ಗೌರವಿಸಿ, ಪಾಲಿಸಬೇಕು. ಸಂವಿಧಾನದ ದುರುಪ ಯೋಗ ಸಲ್ಲದು. ಸಂವಿಧಾನದ ಆಶಯಗಳನ್ನು ಸರಿ ಯಾಗಿ ಮತ್ತು ವಿವೇಚನೆಯಿಂದ ಅರ್ಥೈಸಿಕೊಳ್ಳ ಬೇಕು. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾ ಪ್ರಭುತ್ವದ ಯಶಸ್ಸು ಸಂವಿಧಾನವನ್ನು ಅವಲಂಬಿ ಸಿದೆ. ಭಾರತೀಯ ಸಂವಿಧಾನ ರಾಜಕೀಯ ಮುತ್ಸ ದ್ಧಿಗಳು, ಕಾನೂನು ತಜ್ಞರು, ನ್ಯಾಯವಾದಿಗಳು, ಸಮಾಜ ವಿಜ್ಞಾನಿಗಳು ಮತ್ತು ಎಲ್ಲಾ ಕ್ಷೇತ್ರದ ಬುದ್ಧಿಜೀವಿಗಳು ಪರಸ್ಪರ ಚರ್ಚೆ, ಸಂವಾದ ಮತ್ತು ಸಮಾಲೋಚನೆಯಿಂದ ರೂಪಿಸಿದ್ದಾರೆ.
ವೈವಿಧ್ಯಮಯವಾದ, ಬಹುಧರ್ಮೀಯ ಜನರಿರುವ ಈ ದೇಶಕ್ಕೆ ಆದರ್ಶ ಸಂವಿಧಾನವನ್ನು ರಚಿಸಿದ ಕೀರ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. 26 ನವೆಂಬರ್ 1949 ರಂದು ನಮ್ಮನ್ನು ನಾವು ಭಾರತೀಯ ಸಂವಿಧಾನಕ್ಕೆ ಪ್ರಾಂಜಲ ಮನಸ್ಸಿನಿಂದ ಸಮರ್ಪಿಸಿಕೊಂಡಿದ್ದೇವೆ. ಇದುವೇ ಈ ದಿನದ ಹಿರಿಮೆ ಮತ್ತು ಮಹತ್ವವಾಗಿದೆ ಎಂದು ಅವರು ವಿವರಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಹರಾಳು ಮಹಾಬಲೇಶ್ವರ ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರೊ. ನಾಗರಾಜ ನಾಯ್ಕ ವಂದಿಸಿದರು. ಪ್ರಥಮ ದರ್ಜೆ ಸಹಾಯಕರಾದ ಕೀರ್ತನ ಪ್ರಾರ್ಥಿಸಿದರು. ಸಂವಿಧಾನ ಕುರಿತು ಕಛೇರಿಯ ಹಿರಿಯ ಸಿಬ್ಬಂದಿ ಹನುಮಂತಪ್ಪ ಹಾಗೂ ಎಂ. ಶಾಂತ ಮಾತನಾಡಿದರು.