ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಹರಪನಹಳ್ಳಿ ಶಾಸಕರಿಗೆ ಮನವಿ ಸಲ್ಲಿಕೆ
ಹರಪನಹಳ್ಳಿ, ನ.23- ಮಾದಿಗ ಮತ್ತು ಛಲವಾದಿ ಸಮಾಜದ ವತಿಯಿಂದ ಗುರುವಾರ ತಾಲ್ಲೂಕು ಮಾದಿಗ ಮಹಾಸಭಾ ಹಾಗೂ ಛಲವಾದಿ ಮಹಾಸಭಾದ ದಲಿತ ಮುಖಂಡರು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಯಥಾವತ್ ಜಾರಿಗೆ ಒತ್ತಾಯಿಸಿ, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಶಾಸಕರ ಮನೆ ಮುಂಭಾಗದಲ್ಲಿ ಶಾಂತಿಯುತವಾಗಿ ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರಿಗೆ ಮನವಿ ನೀಡಿದರು.
ಪಟ್ಟಣದ ಹಡಗಲಿ ರಸ್ತೆಗೆ ಹೊಂದಿಕೊಂಡಿರುವ ಕಾಶಿ ಮಠದಲ್ಲಿರುವ ಶಾಸಕರ ಮನೆಗೆ ಗುರುವಾರ ಮಾದಿಗ, ಛಲವಾದಿ, ಸಮಗಾರ, ಮೋಚಿ ಸಮಾಜದವರು ಸೇರಿದಂತೆ ಅನೇಕರು ಭಾಗವಹಿಸಿ, ಸದಾಶಿವ ವರದಿ ಜಾರಿಗಾಗಿ ಶಾಸಕರಿಗೆ ಮನವಿ ಸಲ್ಲಿಸಿದರು.
ಮಾದಿಗ ಸಮಾಜದ ಮುಖಂಡ ಪುಣಬಘಟ್ಟಿ ಹನುಮಂತಪ್ಪ ಮಾತನಾಡಿ, ಮಾದಿಗ ಮತ್ತು ಛಲವಾದಿ ಸಮಾಜಗಳು ಹಿಂದುಳಿದಿದ್ದು, ಆದ್ದರಿಂದ ಶಾಸಕರು ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಸಮಾಜದ ಬಗ್ಗೆ ಒಳ ಮೀಸಲಾತಿಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಧಿವೇಶನದಲ್ಲಿ ಈ ಕುರಿತು ಒತ್ತಾಯ ಮಾಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಮಾದಿಗ ಸಮಾಜದ ಮುಖಂಡ ಕಬ್ಬಳ್ಳಿ ಪರಸಪ್ಪ ಮಾತನಾಡಿ, ಮಾದಿಗ ಸಮಾಜ ಮತ್ತು ಛಲವಾದಿ ಸಮಾಜಗಳು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವಕಾಶ ವಂಚಿತರಾಗಿದ್ದು, ನಮಗೆ ಸಾಮಾಜಿಕ ನ್ಯಾಯದಡಿಯಲ್ಲಿ 101 ಜಾತಿಯಲ್ಲಿ ಪ್ರತ್ಯೇಕವಾಗಿ ಒಳಮೀಸಲಾತಿ ನೀಡಬೇಕು ಎಂದು ಸುಮಾರು 30 ವರ್ಷಗಳಿಂದ ಎರಡು ಸಮಾಜದವರು ಹೋರಾಟ ಮಾಡಿಕೊಂಡು ಬಂದಿದ್ದು, ಮುಂಬ ರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ಒತ್ತಾಯಿಸಬೇಕೆಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಾವಾದ ತಾಲ್ಲೂಕು ಅಧ್ಯಕ್ಷ ಕೆ.ಸುಭಾಶ್ ಮಾತನಾಡಿದರು.
6ನೇ ಗ್ಯಾರಂಟಿಯಾಗಿ ಒಳಮೀಸಲಾತಿ ಕೊಡಲಿ : ಇದೇ ವೇಳೆ ಮಾತನಾಡಿದ ಪುಣಭಘಟ್ಟಿ ನಿಂಗಪ್ಪ ನಮಗೆ ಅನ್ಯಾಯ ಆಗಿದೆ. ನಾವೆಲ್ಲರೂ ಬೀದಿಗಿಳಿದು ಹೋರಾಟ ಮಾಡಬೇಕು. ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವ ಮೂಲಕ ಆರನೇ ಗ್ಯಾರಂಟಿಯಾಗಿ ನಮಗೆ ಒಳ ಮೀಸಲಾತಿ ಕೊಡಲಿ ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು, ನಿಮ್ಮ ಸಮಾಜದವರಾದ ಮುನಿಯಪ್ಪ, ಪರಮೇಶ್ವರ್, ಮಹಾದೇವಪ್ಪ, ರೂಪ ಅವರು ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದಾರೆ. ನೀವು ಕೊಟ್ಟಿರುವ ಮನವಿಯನ್ನು ಮುಖ್ಯಮಂತ್ರಿಯವರಿಗೆ ತಲುಪಿಸುವ ಸೇತುವೆಯಾಗುತ್ತೇನೆ ಎಂದು ಸಮಾಜದ ಮುಖಂಡರಿಗೆ ತಿಳಿಸಿದರು.
ಈ ವೇಳೆ ಅಂಬೇಡ್ಕರ್ ಸಂಘದ ತಾಲ್ಲೂಕು ಅಧ್ಯಕ್ಷ ನಿಚ್ಚನಹಳ್ಳಿ ಭೀಮಪ್ಪ, ಪೂಜಾರ್ ಮರಿಯಪ್ಪ, ಹುಲಿಕಟ್ಟಿ ಚಂದ್ರಪ್ಪ, ಮೈದೂರು ಓ.ರಾಮಣ್ಣ, ಮತ್ತಿಹಳ್ಳಿ ರಾಮಪ್ಪ, ಗೌರಹಳ್ಳಿ ಮಂಜುನಾಥ್, ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಓ.ಮಹಾಂತೇಶ್, ಪುಣಭಘಟ್ಟಿ ನಿಂಗಪ್ಪ, ಕಬ್ಬಳ್ಳಿ ಪರಸಪ್ಪ, ಸಿ.ಚಂದ್ರಪ್ಪ, ಹುಣಸೆಹಳ್ಳಿ ಕೊಟ್ರಪ್ಪ, ಕಲ್ಲಳ್ಳಿ ಹನುಮಂತಪ್ಪ, ಛಲವಾದಿ ಕೊಟ್ರಪ್ಪ, ಛಲವಾದಿ ಬಸವರಾಜ್, ಪುಣಭಘಟ್ಟಿ ಕೆಂಚಪ್ಪ, ಮಂಜಪ್ಪ,
ಮಾಳಗಿ ಕೆಂಚಪ್ಪ, ಯಲ್ಲಪ್ಪ ಸವಣೂರು, ಹಲುವಾಗಲು ರಮೇಶ್, ಕುಂಚೂರು ಸಂಜೀವಪ್ಪ, ಸಿ.ಪ್ರಕಾಶ್, ಕಟ್ಟೇಪ್ಪ, ಪೂಜಾರ್ ಗೋಣೆಪ್ಪ, ಮಾಳಗಿ ರಮೇಶ್, ಕೆ.ಸುಭಾನ್, ಗೌರವಳ್ಳಿ ಹಾಲಪ್ಪ, ಒಡ್ಡಿನಹಳ್ಳಿ ಹನುಮಂತಪ್ಪ, ಕೆ.ಡಿ.ಅಂಜಿನಪ್ಪ, ನಿಚ್ಚವ್ವನಹಳ್ಳಿ ರಾಜಪ್ಪ, ಪೂಜಾರ್ ನವೀನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.