ಹರಪನಹಳ್ಳಿ ತಾಲ್ಲೂಕು ಭಾರತೀಯ ಮಹಿಳಾ ಒಕ್ಕೂಟದ ಸಮ್ಮೇಳನದಲ್ಲಿ ಕಾಂ. ಹೆಚ್. ಎಂ. ಸಂತೋಷ್
ಹರಪನಹಳ್ಳಿ, ನ.21- ತಲೆತಲಾಂತರದಿಂದ ಶೋಷಣೆಗೊಳಗಾಗಿರುವ ಜನ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಸಂವಿಧಾನ ರೂಪಿಸಿರುವ ಮೀಸಲಾತಿಯನ್ನು ತೆಗೆದು ಹಾಕುವ ಸಂಚು ನಡೆದಿದೆ ಎಂದು ವಿಜಯನಗರ ಜಿಲ್ಲೆಯ ಉಸ್ತುವಾರಿ ಕಾಂ. ಎಚ್.ಎಂ. ಸಂತೋಷ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾರತೀಯ ಮಹಿಳಾ ಒಕ್ಕೂಟದ ಮೂರನೇ ತಾಲ್ಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಸರ್ವ ಜನರಿಗೂ ಯಾವುದೇ ತಾರತಮ್ಯವಿಲ್ಲದೆ ಸ್ವಾತಂತ್ರ್ಯ, ಸಮಾನತೆಗಳನ್ನು ಕಲ್ಪಿಸುವ ಮತ ನಿರಪೇಕ್ಷ ಮತ್ತು ಸಮಾಜವಾದದ ಆಶಯಗಳನ್ನು ಹೊತ್ತಿರುವ ಭಾರತ ಸಂವಿಧಾನವನ್ನೇ ಬದಲಿಸುತ್ತೇವೆಂದು ಕೆಲವು ರಾಜಕೀಯ ನಾಯಕರು ಘೋಷಿಸಿದ್ದಾರೆ. ಇವೆಲ್ಲವುಗಳಿಗೆ ಬಿಜೆಪಿ ಒಳಗೊಂಡಂತೆ ಆರ್ ಎಸ್ ಎಸ್ ಪರಿವಾರದ ಕುಮ್ಮಕ್ಕು ಇರುವುದು ಸ್ಪಷ್ಟವಾಗಿದೆ. ಈ ದೇಶದ ಮಹಿಳೆಯರು ಸಂಘಟತರಾಗಿ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು
ಎಐಕೆಎಸ್ನ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಸಂಸತ್ತು ಮತ್ತು ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ 2021 ರಲ್ಲಿ ರಿಟ್ ಅರ್ಜಿ ಹಾಕಿದ ನಂತರ ನ್ಯಾಯಾಲವೂ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿತು. ಆ ಬಳಿಕವಷ್ಟೇ ಈ ಮಸೂದೆಯನ್ನು ಸಂಸತ್ತಿನಲ್ಲಿ ಪಾಸ್ ಮಾಡಲಾಯಿತು. ಆದರೆ ಅದನ್ನು ಈಗ ಸದ್ಯ ಜಾರಿಗೊಳಿಸದೆ 2029ರ ವರೆಗೆ ಕಾಯಬೇಕೆಂದು ಕೆಲವು ಷರತ್ತುಗಳನ್ನು ಕೇಂದ್ರ ಸರ್ಕಾರ ಹಾಕಿ ಮಹಿಳೆಯರ ಮೂಗಿಗೆ ತುಪ್ಪ ಸವರಿದೆ. ಮಹಿಳಾ ಮೀಸಲಾತಿ ಕಾಯ್ದೆ ಕೂಡಲೇ ಜಾರಿಗೊಳಿಸಬೇಕು ಎಂದು ನಾವೆಲ್ಲರೂ ಒತ್ತಾಯಿಸಬೇಕಾಗಿದೆ ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸುಮಾ ಮಾತನಾಡಿ, ರಾಜ್ಯದಲ್ಲಿ ಅವರು ಮಾತೃ ಮರಣ ದರ ಮತ್ತು ಶಿಶು ಮರಣ ದರ ಇವುಗಳ ಗುರಿಯನ್ನು ತಲುಪುವಲ್ಲಿ ನಮ್ಮ ರಾಜ್ಯ ಯಶಸ್ವಿಯಾಗಿಲ್ಲ. ಇದಕ್ಕೆ ಬಹುತೇಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಂಶಗಳು ಕಾರಣ ಎನ್ನಬಹುದು. ದೇವದಾಸಿ ಎಂಬ ಕ್ರೂರ ಪದ್ಧತಿಯಡಿ ಕೆಳ ಸಮುದಾಯದ ಮಹಿಳೆಯರನ್ನು ಶತ ಶತಮಾನಗಳಿಂದ ಶೋಷಿಸುತ್ತಾ ಬಂದಿರುವ ನಮ್ಮ ಸಮಾಜದಲ್ಲಿ ಅವರಿಗೆ ಈಗಲೂ ಘನತೆಯಿಂದ ಬದುಕುವ ಹಕ್ಕು ದಕ್ಕಿಲ್ಲವೆಂಬುದು ಶೋಚನಿಯ. ಜೋಗಮ್ಮ ಮೊದಲಾದ ಸಮುದಾಯಗಳಿಗೂ ಈ ನಾಗರಿಕ ಹಕ್ಕುಗಳನ್ನು ಸರ್ಕಾರ ಒದಗಿಸಬೇಕೆಂದು ಹೇಳಿದರು.
ಸಮ್ಮೇಳನದ ನಂತರ 9 ಸದಸ್ಯರನ್ನು ಒಳಗೊಂಡ ನೂತನ ತಾಲ್ಲೂಕು ಮಂಡಳಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ರೂಪ, ಕಾರ್ಯದರ್ಶಿಯಾಗಿ ನೇತ್ರಾವತಿ, ಖಜಾಂಚಿಯಾಗಿ ಡಿ. ದೇವಿಕ, ಗೌರವಾಧ್ಯಕ್ಷರಾಗಿ ಎಂ. ಸುಮಾ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನಾಯಕಿ ಎ.ಪಿ. ಪುಷ್ಪ, ಬಸಮ್ಮ ಬಳಗನೂರು ಕೊಟ್ರೇಶ್, ರೇಖಾ, ರೇಣುಕಾ, ರೇಣುಕಮ್ಮ ಇನ್ನಿತರರು ಭಾಗವಹಿಸಿದ್ದರು.