ಪ್ರಕೃತಿ ಚಿಕಿತ್ಸಾ ದಿನ ಕಾರ್ಯಕ್ರಮದಲ್ಲಿ ಡಾ. ಗಂಗಾಧರ ವರ್ಮ
ಚಿತ್ರದುರ್ಗ, ನ. 21- ಜಿಲ್ಲಾ ಆಯುಷ್ ಕಛೇರಿ ಮತ್ತು ಜಿಲ್ಲಾ ಆಸ್ಪತ್ರೆ-ಆಯುಷ್ ವಿಭಾಗದ ವತಿಯಿಂದ 6ನೇ ಪ್ರಕೃತಿ ಚಿಕಿತ್ಸಾ ದಿನೋತ್ಸವವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ಅವರು, ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿದ್ದ ಆಯುಷ್ ಆಸ್ಪತ್ರೆಯು ಈಗ 3ನೇ ಕ್ರಾಸ್, ಆದಿಶಕ್ತಿ ನಗರಕ್ಕೆ ಸ್ಥಳಾಂತರವಾಗಿದೆ ಅಲ್ಲಿಯೂ ಸಹ ಇಲ್ಲಿ ನೀಡುತ್ತಿದ್ದ ಎಲ್ಲ ಚಿಕಿತ್ಸೆಗಳನ್ನು ಅಂದರೆ ಆಯುರ್ವೇದ ಚಿಕಿತ್ಸೆ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸೆ ಮತ್ತು ಯುನಾನಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.
ಪ್ರತಿದಿನ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ 30 ರಿಂದ 40 ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿರುವುದು ಮತ್ತು ನಿರೌಷಧ ಚಿಕಿತ್ಸಾ ಪದ್ದತಿಯಿಂದ ಸಂಪೂರ್ಣವಾಗಿ ಗುಣವಾಗುತ್ತಿರುವುದು ಅತೀವ ಸಂತೋಷವನ್ನು ತಂದುಕೊಟ್ಟಿದೆ ಮತ್ತು ಇಲ್ಲಿನ ಎಲ್ಲ ಚಿಕಿತ್ಸೆಗಳಿಗೆ ಜನರು ಸ್ಪಂದಿಸಿ, ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುವುದರ ಜೊತೆಗೆ ನಮ್ಮ ಆಯುಷ್ ಚಿಕಿತ್ಸೆಗಳು ಮನೆಮಾತಾಗು ವಂತಾಗುತ್ತಿವೆ ಎಂದು ತಿಳಿಸಿದರು.
ದಾವಣಗೆರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಾಧಿಕಾರಿ ಡಾ. ಗಂಗಾಧರ ವರ್ಮ ಮಾತನಾಡಿ, ಆರೋಗ್ಯವಂತನಾದ ಮನುಷ್ಯನೇ ನಿಜವಾದ ಭಾಗ್ಯವಂತನು. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲವೆಂ ಬುದು ಅಕ್ಷರಶಃ ಸತ್ಯ. ಆರೋಗ್ಯವೆಂದರೆ ಕೇವಲ ರೋಗರಹಿತವಾಗಿರದೆ, ದೈಹಿಕ, ಮಾನಸಿಕ, ಅಧ್ಯಾತ್ಮಿಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಪ್ರಕೃತಿ ಚಿಕಿತ್ಸೆಯ ಪಾತ್ರ ಅತಿ ಮಹತ್ವದ್ದಾಗಿದೆ ಎಂದರು.
ಪ್ರಕೃತಿ ಚಿಕಿತ್ಸೆ, ನಿಸರ್ಗ ಚಿಕಿತ್ಸೆ, ನಿಸರ್ಗೋಪಚಾರ, ನ್ಯಾಚುರೋಪತಿ, ನೇಚರ್ ಕ್ಯೂರ್ ಹೀಗೆ ಹಲವು ನಾಮಗಳಿಂದ ಕರೆಯಲ್ಪಡುವ ಈ ಚಿಕಿತ್ಸೆಯು ಒಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿದ್ದು ಇದು ಕೇವಲ ರೋಗವನ್ನು ಮಾತ್ರ ದೂರ ಮಾಡುವುದಲ್ಲದೆ, ಮನುಷ್ಯನ ಜೀವನ ಶೈಲಿಯನ್ನು ಸರಿಮಾಡಿ, ದೇಹದ ರೋಗ ನಿರೋಧಕ ಶಕ್ತಿ ಹಾಗೂ ಚೈತನ್ಯ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಡಾ. ರೆಹಮಾನ್, ಡಾ. ದೇವೇಂದ್ರಪ್ಪ ಮಾತನಾಡಿ ದರು. ಹಿರಿಯ ವೈದ್ಯಾಧಿಕಾರಿಗಳಾದ ಡಾ. ಜಗದೀಶ್, ಡಾ. ಉದಯ ಭಾಸ್ಕರ್, ಡಾ. ದೇವರಾಜ್, ಆಸ್ಪತ್ರೆಯ ಸುಧಾ, ಶಿವಮ್ಮ, ರಂಜಿತ, ಶ್ರೀನಿವಾಸ್, ಶಾಂತಮ್ಮ, ಕಾವ್ಯ ಗೌಸಿಯಾ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.