ಕಾರಿಗನೂರು, ನ.20- ರೈತರು ಸಮಾಜಕ್ಕೆ ಆರೋಗ್ಯ ನೀಡಬೇಕು, ಸಮಾಜವು ರೈತರಿಗೆ ಆದಾಯ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ಹೇಳಿದರು.
ಚನ್ನಗಿರಿ ತಾಲ್ಲೂಕು ಕಾರಿಗನೂರು ಗ್ರಾಮದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಾವಯವ ಭತ್ತ ಉತ್ಪಾದನೆ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ಕಾಲಘಟ್ಟದಲ್ಲಿ ಗುಣಮಟ್ಟದ ಆಹಾರ ಉತ್ಪಾದನೆಯ ಕಡೆ ರೈತರು ಗಮನ ಹರಿಸಬೇಕಾ ಗಿದೆ. ಹಾಗಾಗಿ ಪ್ರಸ್ತುತ ಸಾವಯವ ಕೃಷಿಯ ಅನುಕರಣೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ರೈತರು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸದುಪಯೋಗ ಪಡೆದುಕೊಂಡು ಉತ್ಪಾದನೆ ಹೆಚ್ಚಿಸುವುದರ ಜೊತೆ, ಮೌಲ್ಯವರ್ಧನೆ ಹಾಗೂ ನೇರ ಮಾರುಕಟ್ಟೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಪ್ರಸ್ತುತ ಸಾವಯವ ಕೃಷಿಯು ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್ ದೇವರಾಜ್ ಮಾತನಾಡಿ, ರೈತರು ಸಮಾಜಕ್ಕೆ ಆರೋಗ್ಯ ನೀಡು ವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಾವಯವದ ಕಡೆ ರೈತರ ಚಿತ್ತ ವಾಲುತ್ತಿ ರುವುದು ಸಂತಸದ ವಿಷಯವಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯ ತಾಕಿಗೆ ಕಾರ್ಯಕ್ರಮದಲ್ಲಿ ಭಾಗವ ಹಿಸಿದ ರೈತರು ಸಾವಯವ ರೈತ ಟಿ.ವಿ. ರುದ್ರೇಶ್ ಜಮೀನಿಗೆ ಭೇಟಿ ನೀಡಿ ಕಾರ್ಯವನ್ನು ಶ್ಲಾಘಿಸಿದರು.
ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ರೈತರಾದ ಅಲ್ಲಮ ಪ್ರಭು, ತಿಪ್ಪೇರುದ್ರಪ್ಪ ಹಾಗೂ ಟಿ.ವಿ. ರುದ್ರೇಶ್ ಅವರನ್ನು ಸನ್ಮಾನಿಸಲಾಯಿತು.
ವಿಜ್ಞಾನಿಗಳಾದ ಸಣ್ಣಗೌಡರ್, ರಘುರಾಜ ಜೆ., ಸಹಾಯಕ ನಿರ್ದೇಶಕ ಅರುಣ ಕುಮಾರ್, ನೇಗಿಲಯೋಗಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರಿಗನೂರು ಸುತ್ತಲಿನ ರೈತರು ಭಾಗವಹಿಸಿದ್ದರು.