ಯಕ್ಕನಹಳ್ಳಿಯಲ್ಲಿನ `ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ
ಹೊನ್ನಾಳಿ, ನ. 20- ಪ್ರಸ್ತುತ ಭೀಕರ ಬರಗಾಲದ ಪರಿಸ್ಥಿತಿಯಿಂದ ರೈತರು, ಜನಸಾಮಾನ್ಯರು ಹೈರಾಣಾಗಿದ್ದು, ಇದನ್ನು ಮನಗಂಡು ರೈತರು ಪದೇ ಪದೇ ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡಬಾರದು. ಅಧಿಕಾರಿಗಳು ಅವರ ಕೆಲಸಗಳನ್ನು ಕೂಡಲೇ ಮಾಡಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಅನೇಕ ಆದೇಶಗಳನ್ನು ಈಗಾಗಲೇ ಮುಖ್ಯಮಂತ್ರಿಗಳು ಹೊರಡಿಸಿದ್ದರೂ ಕೂಡ ರೈತರು, ಜನರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದು ತಪ್ಪಿಲ್ಲ. ಈ ಕಾರಣಕ್ಕಾಗಿ ಸರ್ಕಾರದ ವತಿಯಿಂದ ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿ.ಇ.ಓಗಳ ಮೇಲೆ ವಿಶೇಷ ಅಧಿಕಾರಿಯಾಗಿ ಐ.ಎ.ಎಸ್ ಅಧಿಕಾರಿಯನ್ನು ಮತ್ತು ತಾಲ್ಲೂಕು ಹಂತದಲ್ಲಿನ ಆಡಳಿತದ ಕಾರ್ಯವೈಖರಿಗಳನ್ನು ಗಮನಿಸಲು ಕೆ.ಎ.ಎಸ್ ಅಧಿಕಾರಿಯನ್ನು ನಿಯೋಜಿಸಲಾಗುತ್ತಿದೆ ಎಂದು ಶಾಸಕ ಡಿ.ಜಿ.ಶಾಂತನ ಗೌಡ ಹೇಳಿದರು.
ತಾಲೂಕಿನ ಯಕ್ಕನಹಳ್ಳಿಯಲ್ಲಿ ನಿನ್ನೆ ನಡೆದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆಗಳಲ್ಲಿ ರೈತರ ಹೆಚ್ಚು ಸಮಸ್ಯೆಗಳು ಇರುತ್ತವೆ. ಜಮೀನುಗಳಿಗೆ ಬಂಡಿ ದಾರಿ, ಕಾಲು ದಾರಿ ಇದ್ದು ಇದನ್ನು ಯಾರಾದರೂ ರೈತರು ತಮ್ಮ ಜಮೀನುಗಳಿಗೆ ಓಡಾಲು ಅಡ್ಡಪಡಿಸುವಂತಿಲ್ಲ ಎಂದು ಹೇಳಿದರು.
ಸರ್ಕಾರದ ಭರವಸೆಗಳಿಂದಾಗಿ ಪ್ರಸ್ತುತ ಸುಮಾರು 3 ಕೋಟಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಶೇಕಡ 81ರಷ್ಟು ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ತಲುಪಿದೆ, ಕೆಲ ತಾಂತ್ರಿಕ ಕಾರಣಗಳಿಂದ ಕೆಲವಾರು ಮಹಿಳೆಯರಿಗೆ ಇನ್ನೂ ಕೂಡ ಹಣ ಲಭ್ಯವಾಗಿಲ್ಲ. ಇದನ್ನು ಕೂಡ ಬಗೆಹರಿಸಲಾಗುವುದು. ಇನ್ನು ಗೃಹಜ್ಯೋತಿ ಯೋಜನೆಯ ಹಳೆ ಬಾಕಿ ಕಟ್ಟಿದರೆ ಮಾತ್ರ ಉಚಿತ ವಿದ್ಯುತ್ ನೀಡಲಾಗುವುದು ಎಂಬುದನ್ನೂ ಕೂಡ ಮುಖ್ಯಮಂತ್ರಿಗಳು ಮನ್ನಾ ಮಾಡಿದ್ದಾರೆ ಎಂದು ಶಾಸಕರು ವಿವರಿಸಿದರು.
ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಪಟ್ಟರಾಜ ಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷೆ ಪವಿತ್ರ, ಮಾಜಿ ಅಧ್ಯಕ್ಷ ದಯಾನಂದ, ಹಿರಿಯ ಮುಖಂಡ ಹನುಮಂತಪ್ಪ ತಾ.ಪಂ. ಇ.ಓ. ರಾಘವೇಂದ್ರ, ಉಪ ತಹಶೀಲ್ದಾರ್ ಮಂಜುನಾಥ್ ಇಂಗಳಗುಂದಿ ಸೇರಿದಂತೆ ಆರೋಗ್ಯ, ಶಿಕ್ಷಣ, ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮದ ಮುಖಂಡರುಗಳು, ಫಲಾನುಭವಿಗಳು ಇದ್ದರು. ಡಾ.ವಿಶ್ವನಟೇಶ್ ಸ್ವಾಗತಿಸಿದರು.