ಕೊಟ್ಟೂರಿನ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ವಿಷಾದ
ಕೊಟ್ಟೂರು, ನ.19- ಹಿಂದಿ, ಇಂಗ್ಲಿಷ್ ಭಾಷೆಗಳ ಅಬ್ಬರದಲ್ಲಿ ಪ್ರಾದೇಶಿಕ ಭಾಷೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡೋತ್ಸವ, ಕನ್ನಡ ನಾಡು- ನುಡಿ ಚಿಂತನೆಯ ವಿಶೇಷ ಕಾರ್ಯಕ್ರಮ `ಕನ್ನಡ ಸಂಭ್ರಮ-50′ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಇಂತಹ ವಿಶೇಷ ಕಾರ್ಯಕ್ರಮಗಳು ನಿರಂತರವಾಗಿ ಸಾಗಬೇಕು, ಕನ್ನಡ ಭಾಷೆ, ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಕನ್ನಡದಲ್ಲಿ ಓದಿದ ಎಲ್ಲರಿಗೂ ಸಹ ಉದ್ಯೋ ಗಾವಕಾಶಗಳು ಹೆಚ್ಚಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಎರಡು ಸಾವಿರ ವರ್ಷಗಳಿಗಿಂತ ಹಳೆಯದಾದ ನಮ್ಮ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದು ವಿದ್ಯಾರ್ಥಿಗಳ ಹಾಗೂ ಎಲ್ಲಾ ಕನ್ನಡಿಗರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕಾದಂಬರಿಕಾರ ಕುಂ. ವೀರಭದ್ರಪ್ಪ ಮಾತನಾಡಿ, ಕನ್ನಡದಲ್ಲಿ ನಗಿಸಿ, ಕನ್ನಡದಲ್ಲೇ ಸಂಭ್ರಮಿಸಿ, ಕನ್ನಡವೇ ಪರಮ ಶ್ರೇಷ್ಠ ಎಂದು ಕನ್ನಡ ಮಾಧ್ಯಮದಲ್ಲಿ ಓದಿ, ಮನುಷ್ಯ ಸಂಬಂಧಗಳನ್ನು ಬೆಸೆವ ಏಕೈಕ ಭಾಷೆ ಅದುವೇ ಕನ್ನಡ ಭಾಷೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದರಾಮ ಕಲ್ಮಠ ಮಾತನಾಡಿ, ಕನ್ನಡ ಭಾಷೆ ಉಳಿದರೆ ಕನ್ನಡದ ಸಂಸ್ಕೃತಿ ಉಳಿಯುತ್ತದೆ. ಹಾಗಾಗಿ ಎಲ್ಲರೂ ಕನ್ನಡ ಭಾಷೆಯನ್ನು, ಕನ್ನಡದ ಪುಸ್ತಕಗಳನ್ನು ನಿರಂತರವಾಗಿ ಓದುವಂತಾಗಿ, ಕನ್ನಡ ನಾಡು- ನುಡಿ ಸೇವೆಗಾಗಿ ನಾವೆಲ್ಲ ಸದಾ ಸಿದ್ಧರಾಗಿರಬೇಕು ಎಂದರು.
ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಎಂಪಿಎಂ ಮಂಜುನಾಥ್ ಹೆಚ್. ಬಿ. ಹಳ್ಳಿ ಮಾತನಾಡಿದರು. ಪ್ರಾಚಾರ್ಯ ಡಾ.ಎಂ ರವಿಕುಮಾರ್ ಸ್ವಾಗತಿಸಿದರು, ಟಿ.ರೇವಣ್ಣ ವಂದಿಸಿದರು. ವಿಜಯಲಕ್ಷ್ಮಿ ಸಜ್ಜನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಂ. ಗುರುಪ್ರಸಾದ್, ಅಡಿಕೆ ಮಂಜುನಾಥಯ್ಯ, ಕೋರಿ ಬಸವರಾಜ್, ಡಿ.ಎಸ್. ಶಿವಮೂರ್ತಿ, ಕೆ.ಬಿ. ಮಲ್ಲಿಕಾರ್ಜುನಪ್ಪ ಹಾಗೂ ಇತರರು ಉಪಸ್ಥಿತರಿದ್ದರು.