ರಾಮಗೊಂಡನಹಳ್ಳಿಯಲ್ಲಿ ಸಹಕಾರ ಸಪ್ತಾಹ
ಮಾಯಕೊಂಡ, ನ. 17 – ಗ್ರಾಮ ಪಂಚಾಯತಿಯಂತೆ ಸಹಕಾರ ಸಂಘಗಳಲ್ಲಿಯೂ ಮೀಸಲಾತಿ ಮತ್ತು ಗಣಕೀಕರಣ ವ್ಯವಸ್ಥೆ ಅಳವಡಿಸಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಪ್ರತಿಪಾದಿಸಿದರು.
ಸಮೀಪದ ರಾಮಗೊಂಡನಹಳ್ಳಿಯಲ್ಲಿ ಬುಧವಾರ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಅಧಿಕಾರ ವಿಕೇಂದ್ರೀಕರಣ ಅಳವಡಿಸಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಮಹಿಳೆಯರಿಗೂ ಮೀಸಲಾತಿ ದೊರಕಿದೆ. ಸಹಕಾರ ಸಂಘದಲ್ಲಿ ಈ ರೀತಿ ವ್ಯವಸ್ಥೆ ಇಂದಿಗೂ ಜಾರಿಯಾಗಿರದ ಕಾರಣ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಿ ಮೀಸಲಾತಿ ಅಳವಡಿಸಲು, ಸರ್ಕಾರದ ಗಮನ ಸೆಳೆಯುತ್ತೇನೆ. ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಸಹಕಾರ ಸಂಘಗಳು ದುಸ್ಥಿತಿಯಲ್ಲಿವೆ. ಗಣಕೀಕರಣವಿಲ್ಲದ ಕಾರಣ ವಂಚನೆ, ವಿಳಂಬ ಹೆಚ್ಚಾಗುತ್ತಿದ್ದು, ಹಿರಿಯ ಅಧಿಕಾರಿಗಳು ಇದರತ್ತ ಗಮನ ಹಸರಿಸಬೇಕು. ರೈತರಿಗೆ ಸಕಾಲದಲ್ಲಿ ಸಾಲ ಒದಗಿಸುವುದೇ ಸಹಕಾರ ಇಲಾಖೆಯಾಗಿದ್ದು, ರೈತನ ಬೆನ್ನೆಲಬಾಗಿ ಸಹಕರಿಸುತ್ತಿದೆ. ಮಹಿಳೆಯರೂ ಇಂದು ವಿವಿಧ ಸಂಸ್ಥೆಗಳಲ್ಲಿ ಸಹಕಾರ ತತ್ವದಡಿ ಕೋಟ್ಯಂತರ ರೂ.ಗಳ ವ್ಯವಹಾರ ನಡೆಸುತ್ತಿದ್ದಾರೆ. ಮಹಿಳೆಯರು ಹೈನುಗಾರಿಕೆಯಿಂದ ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಲು ಅವರು ಕರೆ ನೀಡಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಎಜಿಎಂ. ಗುರುರಾಜ್ ಎನ್. ಅಂಬೇಕರ್ ಉಪನ್ಯಾಸ ನೀಡಿದರು. ಡಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ, ಜಗದೀಶ್ ಬಣಕಾರ್ ಮತ್ತಿತರರು ಮಾತನಾಡಿದರು.
ನಿವೃತ್ತ ನೌಕರ ಭೂಮೇಶ್ವರಪ್ಪ, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ರಾಮಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.
ಶ್ಯಾಗಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್, ಶಿವಮೊಗ್ಗ ದಾವಣಗೆರೆ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಸಿರಿಗೆರೆ ರಾಜಣ್ಣ, ಬಸಪ್ಪ, ಬೇತೂರು ರಾಜಣ್ಣ, ಸೋಮಶೇಖರಪ್ಪ, ಶೇಖರಪ್ಪ, ಸಿದ್ದೇಶ್, ಸಿದ್ದ ನಾಗರಾಜ್, ಶರಣಪ್ಪ, ಮಲ್ಲಿಕಾರ್ಜುನ್, ರಂಗನಾಥ್ ಮತ್ತಿತರರು ಇದ್ದರು.