ಚನ್ನಗಿರಿ, ನ.2- ತಾಲ್ಲೂಕಿನ ಹಿರೇಕೋಗಲೂರು ಗ್ರಾಮದ ಗೋಮಾಳಕ್ಕೆ ಹೋಗುವ ರಸ್ತೆಯಲ್ಲಿ ಭದ್ರಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೂಪರ್ ಬ್ರಾಡ್ಗೇಜ್ ಒಡೆದು ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಪೋಲಾಗುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್, ತಕ್ಷಣವೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ರವರು ನೀರು ಪೋಲಾಗದಂತೆ ದುರಸ್ತಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪೋಲಾಗುತ್ತಿರುವ ನೀರು ಸಮೀ ಪದ ಹಿರೇಕೋಗಲೂರು ಕೆರೆಗೆ ಹರಿಯು ತ್ತಿದೆ. ಕೆರೆಯಲ್ಲಿ ನೀರು ಸಂಗ್ರಹ ಹೆಚ್ಚಾಗಿ ಕೋಡಿ ಬಿದ್ದಿದೆ. ಇದರಿಂದ ಕೊನೆ ಭಾಗದ ಹಳ್ಳಿಗಳಾದ ಹೂವಿನಮಡು, ಮತ್ತಿ, ಗೋಣಿವಾಡ, ಹೊನ್ನಮರಡಿ, ಕುಕ್ಕುವಾಡ, ನಾಗರಸನಹಳ್ಳಿ ಮುಂತಾದ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ.
ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ನೀರು ನಿರ್ವಹಣೆ ಮಾಡುತ್ತಿಲ್ಲ. ಈಗ ಭತ್ತದ ಪೈರು ಕಾಳು ಕಟ್ಟುವ ಹಂತದಲ್ಲಿದೆ. ರೈತರು ನೀರು ನೀರು ಎಂದು ಗೋಗೆರೆಯುತ್ತಿದ್ದಾರೆ. ಇತ್ತ ಕೊನೆ ಭಾಗದ ರೈತರಿಗೆ ದಕ್ಕಬೇಕಾದ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ರೈತರ ಕೂಗಿಗೆ ಸ್ಪಂದಿಸದ ಜಿಲ್ಲಾಡಳಿತ ದಿವ್ಯ ಮೌನಕ್ಕೆ ಶರಣಾಗಿದೆ ಎಂದವರು ಆರೋಪಿಸಿದರು.
ಈ ಸಂದರ್ಭದಲ್ಲಿ ಗೋಣಿವಾಡ ಪಿ.ಎ. ನಾಗರಾಜಪ್ಪ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಎನ್.ಎಂ. ಹಾಲೇಶ್, ಕೊಳೇನಹಳ್ಳಿ ಕೆ ಶರಣಪ್ಪ, ಎಸ್.ಸಿ. ಸಿದ್ದಪ್ಪ ಮುಂತಾದವರು ಉಪಸ್ಥಿತರಿದ್ದರು.