ಪ್ರೀತಿ ಆರೈಕೆ ಟ್ರಸ್ಟ್ನಿಂದ ನ್ಯಾಮತಿಯಲ್ಲಿ ಆರೋಗ್ಯ ಉಚಿತ ಶಿಬಿರ : ಡಾ. ರವಿಕುಮಾರ್
ನ್ಯಾಮತಿ, ಅ. 4- ದಾವಣಗೆರೆ ಜಿಲ್ಲೆಯಾದ್ಯಂತ ಪ್ರತಿ ಹಳ್ಳಿ, ಹೋಬಳಿ ಕ್ಷೇತ್ರದಲ್ಲಿಯೂ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸುವ ಮೂಲಕ ಆರೋಗ್ಯ ದಾಸೋಹದ ಸಂಕಲ್ಪ ಮಾಡಲಾಗಿದೆ ಎಂದು ದಾವಣಗೆರೆಯ ಪ್ರೀತಿ ಆರೈಕೆ ಟ್ರಸ್ಟ್ ಕಾರ್ಯದರ್ಶಿಯೂ ಆದ ಹಿರಿಯ ವೈದ್ಯ ಡಾ. ರವಿಕುಮಾರ್ ಟಿ.ಜಿ ಹೇಳಿದರು.
ಹೊನ್ನಾಳಿ ಸಮೀಪದ ನ್ಯಾಮತಿಯ ಶ್ರೀ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ನಿನ್ನೆ ನಡೆದ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಅವರು ಮಾತನಾಡಿದರು.
ಭಾರತದ ಸಂಸ್ಕೃತಿಯಲ್ಲಿ ಶಿಕ್ಷಣ ಮತ್ತು ಆಹಾರವನ್ನು ದಾಸೋಹದ ರೂಪದಲ್ಲಿ ನೀಡಲಾಗುತ್ತಿದೆ. ಇದರ ಪ್ರೇರಣೆ ಪಡೆದು ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ಆರೋಗ್ಯದ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು. ನಗರ ಪ್ರದೇಶದಿಂದ ದೂರವಿರುವ ಗ್ರಾಮೀಣರಿಗೆ ಬೇರೆ ಬೇರೆ ಕಾರಣಗಳಿಂದ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇದನ್ನು ಗಮನದಲ್ಲಿ ಇರಿಸಿಕೊಂಡು ಮನೆ ಬಾಗಿಲಿಗೇ ಬಂದು ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಪಟ್ಟಣ ಪಂಚಾಯಿತಿ ಅಧಿಕಾರಿ ಗಣೇಶ್ ರಾವ್, ಆರೋಗ್ಯ ಇಲಾಖೆಯ ಹರ್ಷವರ್ಧನ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಎಸ್.ಟಿ. ಮತ್ತು ಸಿಬ್ಬಂದಿ ಶಿಬಿರದ ಸಂಯೋಜಕ ವಿನೋದ್, ಉದ್ಯಮಿಗಳಾದ ನಾಗರಾಜಸ್ವಾಮಿ, ವೈದ್ಯರಾದ ಡಾ. ಶಾಹಿದ್ ಅಹ್ಮದ್, ಟ್ರಸ್ಟ್ ಸಿಬ್ಬಂದಿಗಳಾದ ರವಿಕುಮಾರ್, ವಿಜಯ್, ಬಿ.ಆರ್. ಕಲ್ಲೇಶ್, ಎಚ್.ಡಿ.ಕುಮಾರ್, ಸುದೀಪ್ ಇನ್ನಿತರರು ಇದ್ದರು.