ಶರಣರು ಸಾವಿರವಾದರೂ, ನಿಜಶರಣ ಅಂಬಿಗರ ಚೌಡಯ್ಯ ಒಬ್ಬರೇ

ಶರಣರು ಸಾವಿರವಾದರೂ, ನಿಜಶರಣ ಅಂಬಿಗರ ಚೌಡಯ್ಯ ಒಬ್ಬರೇ

ಹರಪನಹಳ್ಳಿ ತಾಲ್ಲೂಕು ಗಂಗಾಮತ ಸಮಾಜದ ಅಧ್ಯಕ್ಷ, ನಾಟಿ ವೈದ್ಯ ಡಾ. ಹೊಸೂರಪ್ಪ ಬಡಮ್ಮನವರ ಮೆಚ್ಚುಗೆ

ಹರಪನಹಳ್ಳಿ, ಅ.3- ಶರಣರು ಸಾವಿರವಾದರೂ ನಿಜಶರಣ ಅಂಬಿಗರ ಚೌಡಯ್ಯ ಒಬ್ಬರೇ. ಇವರ ಜಯಂತ್ಯೋತ್ಸವ ಆಚರಣೆ ನಮ್ಮಗಳ ಹೆಮ್ಮೆ ಎಂದು ತಾಲ್ಲೂಕು ಗಂಗಾಮತ ಸಮಾಜದ ಅಧ್ಯಕ್ಷ, ನಾಟಿ ವೈದ್ಯ ಡಾ. ಹೊಸೂರಪ್ಪ ಬಡಮ್ಮನವರ ಹೇಳಿದರು.

ತಾಲ್ಲೂಕಿನ ಬಾಗಳಿ ಗ್ರಾಮದ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ಅಂಬಿಗರ  ಚೌಡಯ್ಯ ಜಯಂತ್ಯೋತ್ಸವದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸರ್ವಜನಾಂಗದೊಂದಿಗೆ ಸಾಮರಸ್ಯ ದೊಂದಿಗೆ ಬದುಕುವ ಗಂಗಾಮತ ಸಮಾಜದ ಬಂಧುಗಳು, ಶಾಂತಿ ಮತ್ತು ಸೌಹಾರ್ದ ಜೀವನ ಬಯಸುವವರು. ಇಂತಹ ಸಮಾಜದ ಆರಾಧ್ಯ ದೈವ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವವನ್ನು ಜನವರಿ 2024ರಲ್ಲಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ನಿವೃತ್ತ ಅಭಿಯಂತರ ಗಂಗಾಧರ್ ಮಾತನಾಡಿ, ಹೊಂದಾಣಿಕೆ ಸ್ವಭಾವದ, ಮೃದು ಧೋರಣೆಯ ಗಂಗಾಮತ ಸಮಾಜ ಅಂಬಿಗರ  ಚೌಡಯ್ಯ ಜಯಂತ್ಯೋತ್ಸವ ಆಚರಿಸಲು ನಿರ್ಧರಿಸಿದ್ದು, ಆಚರಣೆ ಯಾವೊಂದು ಅನ್ಯ ಸಮಾಜದೊಂದಿಗಿನ ಪೈಪೋಟಿ ಮತ್ತು ತೋರಿಕೆಗಲ್ಲ. ಬದಲಾಗಿ ನಮ್ಮ ಸಮಾಜದ ಆರಾಧ್ಯ ದೈವ ಚೌಡಯ್ಯ ನವರ ಉತ್ಸವ ಸಮಾಜದಲ್ಲಿ ಹುಟ್ಟಿದ ನಮಗೆ ಆತ್ಮ ತೃಪ್ತಿಗೋಸ್ಕರ ಎಂದರು.

ಉಪಾಧ್ಯಕ್ಷ ಜಾಲಗಾರ ಕೊಟ್ರೇಶ್ ಮಾತನಾಡಿ, ನೇರ ಮತ್ತು ನಿಷ್ಟೂರ ನುಡಿಗಳಿಂದ ಜಗತ್ತಿಗೇ ವಚನಗಳನ್ನು ಸಾರಿದ ಚೌಡಯ್ಯನವರ ಜಯಂತ್ಯೋತ್ಸವ ತಾಲ್ಲೂಕು ಆಡಳಿತದ ಸರಳ ಮತ್ತು ಸುಂದರ ಆಚರಣೆಗೆ ಸೀಮಿತವಾಗದೆ. ಇಡೀ ಸಮಾಜಕ್ಕೊಂದು ಸಂದೇಶ ಸಾರುವ ಉತ್ಸವವಾಗಲಿ ಎಂದು ಅದ್ಧೂರಿ ಆಚರಣೆಗೆ ಸಿದ್ದರಾಗಿದ್ದೇವೆ ಎಂದರು.

ಇದೇ ವೇಳೆ ಗಂಗಾಮತ ಸಮಾಜದ ತಾಲ್ಲೂಕು ಅಧ್ಯಕ್ಷ ಹೊಸೂರಪ್ಪ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಸಾಸ್ವಿಹಳ್ಳಿ ಸಣ್ಣನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಪವಾಡಿ ದೇವೇಂದ್ರ, ಖಜಾಂಚಿ ದುರ್ಗೇಶ್, ನಿವೃತ್ತ ಮೀನುಗಾರಿಕೆ ನಿರ್ದೇಶಕ ಬಸವರಾಜ್ ಪವಾಡಿ, ಚಿಗಟೇರಿ ಸುರೇಶ್, ಶಿಕ್ಷಕರಾದ ಶಿವಾನಂದಪ್ಪ, ಅಂಜಿನಪ್ಪ, ರಾಜಶೇಖರ್, ಪಿ.ಸಿದ್ದೇಶ್, ಹನುಮಂತಪ್ಪ, ಪಕ್ಕೀರಪ್ಪ, ದ್ಯಾಮಪ್ಪ, ಕೊಂಗನಹೊಸೂರು ಮಹಾಂತೇಶ್,  ಹಲವಾಗಲು ಚಂದ್ರಪ್ಪ ಸೇರಿದಂತೆ ಇತರರು ಇದ್ದರು.

error: Content is protected !!