ಇಡೀ ಜಗತ್ತು ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿದ್ದರೆ, ಅದು ಮಹಾತ್ಮ ಗಾಂಧೀಜಿಯನ್ನು ಮಾತ್ರ : ಶಾರದೇಶಾನಂದಜೀ

ಇಡೀ ಜಗತ್ತು ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿದ್ದರೆ, ಅದು ಮಹಾತ್ಮ ಗಾಂಧೀಜಿಯನ್ನು ಮಾತ್ರ : ಶಾರದೇಶಾನಂದಜೀ

ಮಲೇಬೆನ್ನೂರಿನಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮ

ಮಲೇಬೆನ್ನೂರು, ಅ.3- ಇಡೀ ಜಗತ್ತು ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿದ್ದರೆ, ಅದು ಮಹಾತ್ಮ ಗಾಂಧೀಜಿಯನ್ನು ಮಾತ್ರ. ಅವರ ಅಹಿಂಸಾ ಹೋರಾಟ ಹಾಗೂ ಆದರ್ಶದ ಬದುಕು ಅದಕ್ಕೆ ಕಾರಣವಾಗಿದೆ ಎಂದು ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದಜೀ ಮಹಾರಾಜ್‌ ಬಣ್ಣಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ವತಿಯಿಂದ ಇಂದು ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ ಹಾಗೂ ಬೃಹತ್‌ ಜನಜಾಗೃತಿ ಸಮಾವೇಶದ ದಿನ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಗಾಂಧೀಜಿ ಅವರು ಅಹಿಂಸಾ ಹೋರಾಟದ ಮೂಲಕವೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅಂತಹ ವ್ಯಕ್ತಿಯನ್ನು ಕುರಿತು ಡಿ.ಜಿ. ತೆಂಡೂಲ್ಕರ್‌ ಅವರು 8 ಸಂಪುಟಗಳನ್ನು ರಚಿಸಿದ್ದಾರೆ. ಅಷ್ಟೇ ಅಲ್ಲ, ಆ ಸಂಪುಟಗಳಿಂದಾಗಿ ಅವರೂ ಜಗತ್ಪ್ರಸಿದ್ಧರಾದರು ಎಂದರು.

ಕೋಪನೇ ಬರದಂತಹ ಒಬ್ಬ ವ್ಯಕ್ತಿ ಗಾಂಧೀಜಿ ಎಂದು ದ.ರಾ. ಬೇಂದ್ರೆ ಹೇಳಿದ್ದಾರೆ. ಗಾಂಧೀಜಿ ಕುರಿತು ಜಗತ್ತಿನ ಪ್ರಸಿದ್ಧ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಅಂತಹ ವ್ಯಕ್ತಿ ಕುರಿತು ಈ ದಿನ ನಾನು ಇಲ್ಲಿ ಮಾತನಾಡುವುದಕ್ಕೂ ತುಂಬಾ ಹೆಮ್ಮೆ ಎನಿಸುತ್ತಿದೆ ಎಂದು ಸ್ವಾಮಿ ಶಾರ ದೇಶಾನಂದಜೀ ಸಂತಸ ವ್ಯಕ್ತಪಡಿಸಿದರು.

ಗಾಂಧೀಜಿ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಬಗ್ಗೆ ನಿಮ್ಮ ಮಕ್ಕಳಿಗೆ ತಿಳಿಸಿ ಮತ್ತು ಅವರ ಸರಳ ಜೀವನ ನಮ್ಮ ಬದುಕಿನ ಆದರ್ಶವಾಗಬೇಕೆಂದರು.

ಹರಿಹರ ಆರೋಗ್ಯ ಮಾತೆ ಬಸಿಲಿಕ ಚರ್ಚ್‌ ಪ್ರಧಾನ ಗುರುಗಳಾದ ಫಾದರ್‌ ಜಾರ್ಜ್‌ ಮಾತನಾಡಿ, ಮದ್ಯಪಾನ ತೊಲಗಿಸಬೇಕೆಂಬ ಗಾಂಧೀಜಿ ಅವರ ಪ್ರಮುಖ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹೆಜ್ಜೆ ಇಟ್ಟಿದ್ದಾರೆ.

ಕರ್ನಾಟಕ ಜಮಾ ಅತೆ ಇಸ್ಲಾಮೀ ಹಿಂದ್‌ ರಾಜ್ಯ ಕಾರ್ಯದರ್ಶಿ ಜನಾಬ್‌ ಮಹಮ್ಮದ್‌ ಕುಂಞ ಮಾತನಾಡಿ, ಗಾಂಧೀಜಿ ಎಂದರೆ ಸತ್ಯ ಸರಳ, ಗೌರವ, ಅಹಿಂಸಾ, ಭ್ರಾತೃತ್ವ, ಆದರ್ಶವಾಗಿದ್ದು, ಅವರಂತಹ ಬದುಕಿನ ಸ್ವಲ್ಪ ಭಾಗವನ್ನಾದರೂ ನಾವು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಪ್ರತಿಪಾದಿಸಿದರು.

ಗಾಂಧೀಜಿಯ ಬದುಕಿನ ಪಾಠವನ್ನು ನಾವು ಮಕ್ಕಳಿಗೆ ತಿಳಿಸುವ ಅಗತ್ಯತೆ ಇದೆ. ಏಕೆಂದರೆ ನಾವು `ನಶೆ’ಯಿಂದ ಜನರನ್ನು ಹೊರತರಬೇಕಿದ್ದು, ಅದಕ್ಕಾಗಿ ಡಾ. ವೀರೇಂದ್ರ ಹೆಗ್ಗಡೆ ಅವರು ಈಗಾಗಲೇ ಸಂಕಲ್ಪ ಮಾಡಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು. 

ಈ ಕೆಟ್ಟ ಮದ್ಯದ ವಿರುದ್ಧ 6ನೇ ಶತಮಾನದಲ್ಲೇ ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರ ಪರಿಣಾಮ ಇವತ್ತು ಮುಸ್ಲಿಮರು ಮದ್ಯಪಾನದಿಂದ ದೂರವಿದ್ದಾರೆ. ಇದೇ ರೀತಿ ವೀರೇಂದ್ರ ಹೆಗ್ಗಡೆ ಅವರ ಈ ಹೋರಾಟ ಮುಂದೊಂದು ದಿನ ಖಂಡಿತಾ ಫಲ ನೀಡಲಿದೆ ಎಂಬ ವಿಶ್ವಾಸ ನನಗಿದೆ. ತಮ್ಮ ಪತಿ ಮದ್ಯ ಸೇವಿಸುವುದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿದ್ದ ಶೇ.90 ರಷ್ಟು ಮಹಿಳೆಯರು ತಮ್ಮ ಮಕ್ಕಳಿಗಾಗಿ ಬದುಕಿದ್ದಾರೆಂದು ವರದಿ ಹೇಳುತ್ತದೆೆ. ಅಂತಹ ಮದ್ಯ ಎಲ್ಲಾ ಕೆಡಕುಗಳ ತಾಯಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಜನ ಮದ್ಯದಿಂದ ಹೊರಬರುವ ದೊಡ್ಡ ಮನಸ್ಸು ಮಾಡುವ ಮೂಲಕ ವೀರೇಂದ್ರ ಹೆಗ್ಗಡೆ ಅವರ ಪ್ರಮಾಣ ಪ್ರಯತ್ನವನ್ನು ಸಕಾರಗೊಳಿಸಿ ಎಂದು ಮಹಮ್ಮದ್‌ ಕುಂಞ ಮನವಿ ಮಾಡಿದರು. 

ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ. ನಾಗರಾಜ್‌ ಕಾಕನೂರು ಅವರು ನವ ಜೀವನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನಾಳಿ ಬಾಬಣ್ಣ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಜನ ಜಾಗೃತಿ ವೇದಿಕೆಯ ನೂತನ ಉಪಾಧ್ಯಕ್ಷ ಸಿರಿಗೆರೆ ನಾಗನಗೌಡ್ರು, ಸದಸ್ಯರಾದ ರಾಜಶೇಖರ್‌ ಕೊಂಡಜ್ಜಿ, ಬೆಣ್ಣೆಹಳ್ಳಿ ಹಾಲೇಶಪ್ಪ, ಅಣಬೇರು ಮಂಜಣ್ಣ, ಕೆ.ಎಸ್‌. ಶುಭ, ಪದ್ಮರಾಜ್‌ ಜೈನ್‌, ಜಿಗಳಿ ಪ್ರಕಾಶ್‌, ಬೆಳ್ಳೂಡಿ ರವಿಶಂಕರ್‌, ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟಿನ ಬಿ. ಚಿದಾನಂದಪ್ಪ, ಬಿ.ನಾಗೇಂದ್ರಪ್ಪ, ಬಿ.ನಾಗೇಶ್‌, ಬಿ.ಉಮಾಶಂಕರ್‌, ಜಿಗಳಿಯ ಜಿ. ಆನಂದಪ್ಪ, ಗೌಡ್ರ ಬಸವರಾಜಪ್ಪ, ನಾಗಸನಹಳ್ಳಿ ಮಹೇಶ್ವರಪ್ಪ, ರೈಸ್‌ ಮಿಲ್‌ ಮಾಲೀಕರಾದ ಯಕ್ಕನಹಳ್ಳಿ ಬಸವರಾಜಪ್ಪ, ತಳಸದ ಬಸವರಾಜ್‌, ಬಿ. ವೀರಯ್ಯ, ಯಲವಟ್ಟಿಯ ಡಿ. ಯೋಮಕೇಶ್ವರಪ್ಪ, ಜಿ. ಆಂಜನೇಯ, ಆನಂದಚಾರ್‌, ಬೆಣ್ಣೆಹಳ್ಳಿ ಬಸವರಾಜ್‌, ಮಲ್ಲಿಕಾರ್ಜುನ್‌ ಕಲಾಲ್‌, ಹೆಚ್‌.ಎಂ. ಸದಾನಂದ್, ಕೊಕ್ಕನೂರು ಒಕ್ಕೂಟದ ಅಧ್ಯಕ್ಷ ಹನುಮಂತರಾಯ, ಯೋಜನೆಯ ಮೇಲ್ವಿಚಾರಕರಾದ ಚಂದ್ರಪ್ಪ, ಗಂಗಾಧರ್‌, ಹರೀಶ್‌, ರಕ್ಷಿತಾ, ಸಂಪತ್‌ಲಕ್ಷ್ಮಿ, ಸಂತೋಷಿನಿ, ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಸವಿತಾ, ಭಾರತಿ ಸೇರಿದಂತೆ ಇತರರು ಭಾಗವಹಿಸಿದ್ದರು. 

ಕೊಮಾರನಹಳ್ಳಿಯಲ್ಲಿ ನಡೆದ 1705ನೇ ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್‌ ಪಟೇಲ್‌ ಮಾತನಾಡಿದರು.

ಹರಿಹರ ಯೋಜನಾಧಿಕಾರಿ ಗಣಪತಿ ಮಾಳಂಜಿ ಸ್ವಾಗತಿಸಿದರು. ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗರಾಜ್‌ ಕುಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಮೇಲ್ವಿಚಾರಕ ಮಾರುತಿಗೌಡ ಕಾರ್ಯ ಕ್ರಮ ನಿರೂಪಿಸಿದರೆ,   ಮಲೇಬೆನ್ನೂರು ಯೋಜನಾ ಧಿಕಾರಿ ವಸಂತ್‌ ದೇವಾಡಿಗ ವಂದಿಸಿದರು.

error: Content is protected !!