ಹಾಲಿವಾಣದಲ್ಲಿ `ಗೀತಾ ಜ್ಞಾನಾಮೃತ ಭವನ’ದ ಲೋಕಾರ್ಪಣೆ ಸಮಾರಂಭದಲ್ಲಿ ಬಿ.ಕೆ. ಶುಕ್ಲಾ ದೀದೀಜಿ
ಮಲೇಬೆನ್ನೂರು, ಅ. 2- ಈಶ್ವರೀಯ ವಿಶ್ವವಿದ್ಯಾಲಯವು ಜಗತ್ತಿನಲ್ಲಿ ಸತ್ಯಶುದ್ಧವಾದ ಜ್ಞಾನವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿಯ ನವದೆಹಲಿಯ ಹರಿನಗರ ಉಪವಲಯದ ನಿರ್ದೇಶಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶುಕ್ಲಾ ದೀದೀಜಿ ತಿಳಿಸಿದರು.
ಹಿರೇಹಾಲಿವಾಣ ಗ್ರಾಮದಲ್ಲಿ ಮಲೇಬೆನ್ನೂರಿನ ಈಶ್ವರೀಯ ವಿವಿ ಕೇಂದ್ರದ ಆಶ್ರಯದಲ್ಲಿ ನೂತನವಾಗಿ ನಿರ್ಮಿ ಸಿರುವ `ಗೀತಾ ಜ್ಞಾನಾಮೃತ ಭವನ’ವನ್ನು ಲೋಕಾರ್ಪಣೆ ಮಾಡಿ, ನಂತರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಜೀವನ ಸುಖ-ಶಾಂತಿಯಿಂದ ಸಂಪನ್ನಗೊಳ್ಳಬೇಕೆಂಬ ಉದ್ದೇಶವನ್ನು ಈಶ್ವರೀಯ ವಿವಿ ಹೊಂದಿದ್ದು, ಈ ನಿಟ್ಟಿನಲ್ಲಿ ನಮ್ಮ ಕೇಂದ್ರಗಳು ಜಗತ್ತಿನ ತುಂಬೆಲ್ಲಾ ಕಾರ್ಯ ನಿರ್ವಹಿಸುತ್ತಿವೆ. ಒಂದು ಸಣ್ಣ ಹಳ್ಳಿಯಲ್ಲಿ ಇಂತಹ ಸುಸಜ್ಜಿತ ಕಟ್ಟಡವನ್ನು ಕಟ್ಟಿ, ಅದಕ್ಕೆ `ಗೀತಾ ಜ್ಞಾನಾಮೃತ ಭವನ’ ಎಂದು ನಾಮಕರಣ ಮಾಡಿರುವುದು ನಮಗೆ ಅತೀವ ಸಂತಸ ತಂದಿದೆ.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಈಶ್ವರೀಯ ವಿವಿಯ ಹುಬ್ಬಳ್ಳಿ ವಲಯದ ನಿರ್ದೇಶಕರಾದ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಮಾತನಾಡಿ, ಈಶ್ವರೀಯ ವಿಶ್ವವಿದ್ಯಾಲಯವು ಇಂದು ಜಗತ್ತಿನ 140 ದೇಶಗಳಲ್ಲಿ ಈಶ್ವರನ ಶಿಕ್ಷಣ ನೀಡುತ್ತಿದೆ. ಇನ್ನು 15 ವರ್ಷಗಳಲ್ಲಿ ನಮ್ಮ ಭಾರತ ದೇವತೆಗಳನ್ನು ಅವತರಿಸುವ ದೇಶವಾಗಲಿದ್ದು, ಸ್ವಯಂ ವಿಷ್ಣುವಿನ ಅವತಾರ ದೇಶದೆಲ್ಲೆಡೆ ಆಗಲಿದೆ. ಮರು ಜನ್ಮದಲ್ಲಿ ನಾವು-ನೀವು ದೇವತೆಗಳಾಗಿ ಹುಟ್ಟುತ್ತೇವೆ. ಈಶ್ವರೀಯ ವಿವಿ ದೇವತೆಗಳನ್ನು ತಯಾರು ಮಾಡುವುದಕ್ಕಾಗಿ ಅವತರಿಸಿದ್ದು, ಈ ಕೆಲಸವನ್ನು ಶಿವ ಪರಮಾತ್ಮನು ನಮ್ಮ ಮೂಲಕ ಮಾಡಿಸುತ್ತಿದ್ದಾನೆ ಎಂದು ತಿಳಿಸಿದರು.
ಕೆಲವೇ ದಿನಗಳಲ್ಲಿ ಜನರು ಶಾಸಕ ಹರೀಶ್ ಅವರನ್ನು ಈಶ್ವರೀಯ ವಿವಿ ಕೇಂದ್ರ ತೆರೆಯಲು ಅನುದಾನ ನೀಡಿ, ನಮಗೆ ಬೇರೇನೂ ಬೇಡ ಎನ್ನುವ ಕಾಲ ಬರುತ್ತದೆ.
ಅದಕ್ಕೂ ಮೊದಲೇ ಶಾಸಕರು, ಹರಿಹರ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲೂ ರಾಜಯೋಗ ಕೇಂದ್ರವನ್ನು ಕಟ್ಟಿಸಿಕೊಡಬೇಕೆಂದು ಮನವಿ ಮಾಡಿದ ಡಾ. ಬಸವರಾಜ ರಾಜಋಷಿ ಅವರು, ಜಾತಿ ರಹಿತವಾಗಿ ಪ್ರೀತಿಯಿಂದ ಈಶ್ವರನ ಪಾಠದ ಸಮೃದ್ಧಿ ಬದುಕು ಕಟ್ಟಿಕೊಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಗ್ರಾಮ ಈ ದಿನ ಧಾರ್ಮಿಕ ಭಕ್ತಿ-ಭಾವಗಳ ಕೇಂದ್ರವಾಗಿ ಹೊರಹೊಮ್ಮಿದೆ. ದೇಶ-ವಿದೇಶಗಳಿಂದ ಈಶ್ವರೀಯ ವಿವಿ ದೇವತೆಗಳು ಇಲ್ಲಿಗೆ ಬಂದಿದ್ದಾರೆ. ಇವರ ಪಾದಸ್ಪರ್ಶದಿಂದ ನಮ್ಮ ಭಾಗದಲ್ಲಿ ಮಳೆ-ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.
ತಮಿಳುನಾಡಿನ ತಿರುವಣ್ಣಾಮಲೈ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಉಮಾಜೀ ಮಾತನಾಡಿ, ಮಹಾನ್ ಕರ್ಮದಿಂದ ಗಾಂಧೀಜಿ ಮಹಾತ್ಮ ಹೇಗಾದರೋ ಹಾಗೆ ಗೀತಾ ಜ್ಞಾನಾಮೃತ ಭವನಕ್ಕೆ ಬರುವವರು ದೇವಾತ್ಮರಾಗುತ್ತಾರೆ ಎಂದರು.
ಬೆಂಗಳೂರು ಜಯನಗರ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಾಗರತ್ನಾಜಿ, ಅಮೆರಿಕಾದ ವರ್ಜೀನಿಯಾ ಕೇಂದ್ರದ ರಾಜಯೋಗಿನಿ ಬ್ರಹ್ಮಾಕುಮಾರ ಪವನ್ ಕುಮಾರ್, ಸೇನಾ ಕ್ಯಾಪ್ಟನ್ ಶಿವಸಿಂಗ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ಮಾತನಾಡಿದರು.
ಹುಬ್ಬಳ್ಳಿ ವಲಯ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀದೇವಿ ಎಸ್.ಜಿ. ಮಂಜುನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಸಂತ್ ದೇವಾಡಿಗ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್. ಹನುಮಂತಪ್ಪ, ಕಾಂಗ್ರೆಸ್ ಮುಖಂಡ ಶಿವಕುಮಾರ್ ಒಡೆಯರ್, ಹಿರಿಯರಾದ ಬಿ. ಪಂಚಪ್ಪ, ಹೆಚ್.ಎಸ್. ರುದ್ರಮ್ಮ, ಡಾ. ಭಾರತಿ ರಂಗಸ್ವಾಮಿ, ಜಿಗಳಿ ಆನಂದಪ್ಪ, ಹೆಚ್.ಎಸ್. ವೀರಭದ್ರಯ್ಯ, ಕೆ. ಷಣ್ಮುಖಪ್ಪ, ಮುದ್ದಪ್ಳ ಶಿವಶಂಕರ್, ಕುಣೆಬೆಳಕೆರೆ ರಾಮು, ಗ್ರಾಮದ ಮುರುಳಿ ಸೇರಿದಂತೆ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಈಶ್ವರೀಯ ಶಿಕ್ಷಕಿಯರು ಭಾಗವಹಿಸಿದ್ದರು.
ಈ ವೇಳೆ ನಿವೃತ್ತ ಇಇ ಹಾಗೂ ನೂತನ ಭವನದ ಮೇಲ್ವಿಚಾರಕ ಎಸ್.ಜಿ. ಶಿವಕುಮಾರ್ ಅವರಿಗೆ ನಾಗರತ್ನಾಜಿ ಅವರು ಚಿನ್ನದ ಪದಕ ನೀಡಿ ಗೌರವಿಸಿದರು.
ಮಲೇಬೆನ್ನೂರು ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀ ಸ್ವಾಗತಿಸಿದರು. ಶಿರಸಿ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜಿ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಹೊಳೆಸಿರಿಗೆರೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಾಂತಾಜಿ ವಂದಿಸಿದರು.