ಅರಸೀಕೆರೆಯ ಕೋಲಶಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವದಲ್ಲಿ ಶ್ರೀ ನಿಜಗುಣಾನಂದ ಸ್ವಾಮೀಜಿ
ಹರಪನಹಳ್ಳಿ, ಅ. 2 – ರಾಜಕಾರಣಿಗಳು ಯುವಕರ ಕೈಯಲ್ಲಿ ಪಕ್ಷದ ಬಾವುಟ ನೀಡುವ ಬದಲು ಕಾಯಕದ ಬಾವುಟ ನೀಡಬೇಕೆಂದು ಮುಂಡರಗಿ ತೋಂಟದಾರ್ಯ ಶಾಖಾ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಹಾಗೂ ವೈ. ಅಣ್ಣಪ್ಪ ಪದವಿ ಕಾಲೇಜಿನ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಭಾರತ ಬಹುತ್ವ ರಾಜ್ಯಗಳನ್ನು ಹೊಂದಿರುವ ದೇಶ ಇದಾಗಿದೆ. ದಕ್ಷಿಣ ಭಾರತದ ರಾಜ್ಯಗಳು ಶಿಕ್ಷಣ ಹೊಂದಿವೆ. ಆದರೆ ಜ್ಞಾನದ ಕೊರತೆಯಿಂದ ಆ ರಾಜ್ಯಗಳ ಅಭಿವೃದ್ಧಿ ಕುಂಠಿತವಾಗಿದೆ. ಕರ್ನಾಟಕ ರಾಜ್ಯ ಶಿಕ್ಷಣದ ಜೊತೆಗೆ ಜ್ಞಾನವನ್ನು ಹೊಂದಿದ್ದು, ಇದಕ್ಕೆ ರಾಜ್ಯದಲ್ಲಿರುವ ಲಿಂಗಾಯಿತ ಮಠ, ಮಾನ್ಯಗಳು ಕಾರಣವಾಗಿವೆ ಎಂದರು.
ರಾಜ್ಯದ ಮಠಗಳು ಮನುಷ್ಯರನ್ನು ದೇವರನ್ನಾಗಿ ಕಂಡಿದ್ದಾರೆ, ಶೈಕ್ಷಣಿಕ ಕ್ರಾಂತಿಯನ್ನು ಮೂಡಿಸಿದ್ದಾರೆ, ಗುಡಿಗಳನ್ನು ನಿರ್ಮಿಸಬಹುದು, ಹಣವನ್ನು ತರಬಹುದು ಆದರೆ ಉತ್ತಮ ಸ್ವಾಮಿಗಳನ್ನು ತರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಸವ ತತ್ವದ ಆಧಾರದಲ್ಲಿ ಅರಸೀಕೆರೆ ಕೋಲ ಶಾಂತೇಶ್ವರ ಶ್ರೀಗಳು ನಡೆಯುತ್ತಿದ್ದಾರೆ ಎಂದು ಅವರ ಕಾಯಕವನ್ನು ಶ್ಲಾಘಿಸಿದರು.
ರೈತರ ಮಕ್ಕಳಿಗೆ ಹೆಣ್ಣು ಕೊಡುವು ದನ್ನು ವಿದ್ಯಾವಂತರು ಕಲಿಯಬೇಕಿದೆ ಎಂದ ಅವರು, ಮೌಢ್ಯತೆಯನ್ನು ತೊ ಡೆದು ಹಾಕಬೇಕಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಲು ಮಠ, ಮಾನ್ಯಗಳು ಶ್ರಮಿಸಬೇಕಿದೆ ಎಂದರು.
ನಾನು ಮೂಡನಂಬಿಕೆಯ ವಿರುದ್ಧ ಜಾಗೃತಿಯನ್ನು ಮೂಡಿಸುತ್ತಿದ್ದೇನೆ ಆದರೆ ನನಗೆ ಕೊಲೆಬೆದರಿಕೆಗಳು ಬರುವುದು ಸಹಜ, ನನಗೆ ಬುದ್ದ, ಬಸವ ಹಾಗೂ ಅಂಬೇಡ್ಕರವರ ತತ್ವ ಆದರ್ಶಗಳಲ್ಲಿ ನಂಬಿಕೆಯಿದ್ದು ಯಾವುದಕ್ಕು ಜಗ್ಗುವುದಿಲ್ಲ ಎಂದು ಬೆದರಿಕೆ ಕುರಿತು ಪತ್ರದ ಬಗ್ಗೆ ಮಾರ್ಮಿಕವಾಗಿ ನುಡಿದರು.
ಅಬಕಾರಿ ಜಂಟಿ ಆಯುಕ್ತ ವೈ.ಡಿ. ಮಂಜುನಾಥ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ತತ್ವದ ಆಧಾರದ ಮೇಲೆ ಕಾಯಕ ಯೋಗಿಯಂತೆ ಮಠವನ್ನು ಅಭಿವೃದ್ಧಿ, ಸಾಮಾಜಿಕ, ಆ ರ್ಥಿಕ, ಶೈಕ್ಷಣಿಕವಾಗಿ ಬೆಳೆಯಲು ಶಾಂತ ಲಿಂಗದೇಶಿ ಶ್ರೀಗಳು ಕಾರಣರಾಗಿದ್ದಾರೆ ಎಂದರು. ಈ ಮಠದ ಅಭಿವೃದ್ಧಿಗಾಗಿ ರೂ.25 ಲಕ್ಷ ಹಾಗೂ ನನ್ನ ಸಹೋದರನ ಹೆಸರಿನಲ್ಲಿರುವ ಪದವಿ ಕಾಲೇಜಿನ ಅಭಿವೃದ್ಧಿಗೆ 50 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಧರ್ಮಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ದೊರೆಯುವುದು ಬಹಳ ಕಷ್ಟ, ಆದರೆ ಈ ಭಾಗದಲ್ಲಿ ಪಂಚ ಗಣಾಧೀಶ್ವರರ ಪೈಕಿ ಕೋಲಶಾಂತೇಶ್ವರ ಮಠವು ಶಿಕ್ಷಣ ನೀಡುವಲ್ಲಿ ಮುಂದಾಗಿರುವುದು ಶ್ಲ್ಯಾಘನೀಯ ಕೆಲಸವಾಗಿ ದ್ದು, ದಾವಣಗೆರೆ ಶಾಮನೂರು ಕುಟುಂಬ ಹಾ ಗೂ ಕಲ್ಯಾಣ ಕರ್ನಾಟಕಕ್ಕೆ ಹರಪನಹಳ್ಳಿ ಸೇರಿ ದರೂ ನಮ್ಮ ಸಂಬಂಧ ಗಟ್ಟಿಯಾಗಿದೆ ಎಂದರು.
ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಶ್ರೀಗಳು ಮಾತನಾಡಿ, ಮಠ, ಮಾನ್ಯಗಳು ವೈಚಾರಿಕ ಜ್ಞಾನ ಮತ್ತು ವಿಚಾರಧಾರೆಗಳನ್ನು ಬಿತ್ತುವ ಕೇಂದ್ರಗಳಾಗಬೇಕು. ಮಠಗಳು ಮಾತ್ರ ಬದಲಾದರೆ ಸಾಲದು ಭಕ್ತರ ಮನಸ್ಸುಗಳು ಪರಿವರ್ತನೆಯಾಗಬೇಕು ಎಂದು ಹೇಳಿದರು.
ಗದಗ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರಾಸ್ತಾವಿಕವಾಗಿ ಪ್ರೊ. ಎಸ್. ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿದರು.
ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪ, ಶಾಸಕರುಗಳಾದ ಬಿ. ದೇವೆಂದ್ರಪ್ಪ, ಎಂ.ಪಿ. ಲತಾ ಮಲ್ಲಿಕಾರ್ಜುನ್, ಮಾಜಿ ಶಾಸಕ ಎಚ್.ಪಿ. ರಾಜೇಶ್, ಅಕ್ಷರ ಸೀಡ್ಸ್ ಮಾಲೀಕ ಎನ್. ಕೊಟ್ರೇಶ್, ಮುಖಂಡ ಎಂ. ರಾಜಶೇಖರ, ವೈ.ಡಿ. ಅಣ್ಣಪ್ಪ, ಕೆ.ಪಿ.ಪಾಲಯ್ಯ, ಪ್ರಶಾಂತ ಪಾಟೀಲ್, ವೈ.ಡಿ. ರಂಗಸ್ವಾಮಿ, ಪ್ರಕಾಶ ಪಾಟೀಲ್, ಯಶವಂತಗೌಡ, ಎಸ್. ಮಂಜುನಾಥ, ತಿರುಮಲ, ವೀರಭದ್ರಚಾರ್ಯ, ಸೇರಿದಂತೆ ಇತರರು ಉಪಸ್ಥಿತರಿದ್ದರು.