ಹರಪನಹಳ್ಳಿ, ಅ. 1- ಕಸಮುಕ್ತ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಸ್ಥಳೀಯ ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಭಾನುವಾರ ಪುರಸಭೆಯವರು ಆಯೋಜಿಸಿದ್ದ ಕಸಮುಕ್ತ ಭಾರತ ಕಾರ್ಯಕ್ರಮಕ್ಕೆ ಕಸ ಗುಡಿಸು ವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಸವಿದ್ದೆಡೆ ಅನಾರೋಗ್ಯ ಇರುತ್ತದೆ, ಆದ್ದರಿಂದ ಮನೆ, ಓಣಿ ಯಿಂದ ಹಿಡಿದು ಎಲ್ಲಾ ಕಡೆ ಸ್ವಚ್ಚತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ, ಆರೋಗ್ಯಕ್ಕಾಗಿ ಸ್ವಚ್ಛತೆ ಅವಶ್ಯಕತೆ ಇದೆ ಎಂದರು. ಕೇವಲ ಇಂದು ಮಾತ್ರ ಸ್ವಚ್ಛತೆ ಮಾಡಿ ಕೈ ಬಿಡ ಬೇಡಿ, ಪ್ರತಿ ತಿಂಗಳು ಒಂದು ದಿವಸ ಬೃಹತ್ ಸ್ವಚ್ಛತಾ ಅಭಿಯಾನ ಕೈಗೊಳ್ಳಿ ಎಂದು ಅವರು ಪುರಸಭಾ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸಲಹೆ ನೀಡಿದರು.
ಬೈಯೋಗ್ರೇಡೆಬಲ್ ಪ್ಲಾಸ್ಟಿಕ್ ಉಪಯೋಗಿಸಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ ಅವರು, ಈ ಪ್ಲಾಸ್ಟಿಕ್ ಒಂದು ತಿಂಗಳಲ್ಲಿ ಕರಗಿ ಹೋಗುತ್ತದೆ. ಆದ್ದರಿಂದ ಎಲ್ಲರೂ ಇಂತಹ ಪ್ಲಾಸ್ಟಿಕ್ ಉಪಯೋಗಿಸಿ ಎಂದು ಹೇಳಿದರು.
ಪ್ರವಾಸಿ ಮಂದಿರ ವೃತ್ತದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಾಂಧಿ ಮೆಮೋರಿಯಲ್ ಹಾಲ್ವರೆಗೂ ಪುರಸಭಾ ಸಿಬ್ಬಂದಿ, ಸದಸ್ಯರು, ವಿವಿಧ ಸಂಘಗಳ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಕೈಗೊಂಡರು.
ಪುರಸಭಾ ಸದಸ್ಯರಾದ ಎಂ.ವಿ.ಅಂಜಿನಪ್ಪ, ಉದ್ದಾರ ಗಣೇಶ, ಟಿ.ವೆಂಕಟೇಶ, ಕಿರಣ್ ಶಾನ್ ಬಾಗ್, ಅಬ್ದುಲ್ ರಹಿಮಾನ್, ವಿನಯ ಗೌಳಿ ಹಾಗೂ ಮುಖಂಡರಾದ ಬಿ.ಕೆ.ಪ್ರಕಾಶ, ವಾಗೀಶ, ಚಿಕ್ಕೇರಿ ಬಸಪ್ಪ, ಕಸಾಪ ಅಧ್ಯಕ್ಷ ಉಚ್ಚೆಂಗೆಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಆರೋಗ್ಯ ನಿರೀಕ್ಷಕ ಮಂಜುನಾಥ ಹಾಗು ಇತರರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.