ಹಿರೇಹಾಲಿವಾಣ ಗ್ರಾಮದಲ್ಲಿ ಇಂದು
`ಬ್ರಹ್ಮಾಕುಮಾರೀಸ್’ ಸಂಸ್ಥೆ ಶಾಖೆಯ ರಜತ ಮಹೋತ್ಸವ
ಸಾಮಾನ್ಯ ಮಾನವನನ್ನು ಮಹಾ ಮಾನವನನ್ನಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವಿಶ್ವ ಪರಿವರ್ತನೆಗೆ ಬದ್ಧವಾಗಿರುವ ಅಂತರರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆಯಾಗಿದೆ. ಈ ಸಂಸ್ಥೆಯು ವಿಶ್ವಸಂಸ್ಥೆಯಲ್ಲಿ ಸರ್ಕಾರೇತರ ಸದಸ್ಯತ್ವ ಪಡೆದು ಅಲ್ಲಿಯೂ ಸಹ ಸೇವೆ ಸಲ್ಲಿಸುವುದರೊಂದಿಗೆ ಸಮಾಜದಲ್ಲಿ ತನ್ನದೇ ಆದ ವಿಶಿಷ್ಟ ಮಾದರಿಯ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿರುವ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಂಸ್ಥೆಯು ಜಗತ್ತಿನಾದ್ಯಂತ 140 ರಾಷ್ಟ್ರಗಳಲ್ಲಿ ತನ್ನ ಸೇವಾ ಕೇಂದ್ರಗಳನ್ನು ಹೊಂದಿದ್ದು, ಈ ಪೈಕಿ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿಯ ಹಿರೇ ಹಾಲಿವಾಣದ ಶಾಖೆ ಕೂಡಾ ಒಂದಾಗಿದೆ. ಈ ಶಾಖೆಯು ಇಂದು ತನ್ನ ಸ್ಥಾಪನೆಯ 25ನೇ ವರ್ಷಾಚರಣೆಯ ರಜತ ಮಹೋತ್ಸವದ ಸಂಭ್ರಮದಲ್ಲಿದೆ.
ಜೊತೆಗೆ, ತನ್ನ ಸ್ವಂತ ಕಟ್ಟಡದ ಉದ್ಘಾಟನೆಯ ಸಡಗರದಲ್ಲೂ ಇದೆ. 1998ರಲ್ಲಿ ಮಲೇಬೆನ್ನೂರಿನ ಬ್ರಹ್ಮಾಕುಮಾರೀಸ್ ಸಂಸ್ಥೆಯಿಂದ ಚಿಕ್ಕದಾಗಿ ಅಂಗನವಾಡಿ ಕೇಂದ್ರದಲ್ಲಿ ತನ್ನ ಸೇವೆ ಆರಂಭಿಸಿದ ಬ್ರಹ್ಮಾಕುಮಾರೀಸ್ ಸಂಸ್ಥೆ ಶಾಖೆಯು ಇಂದು 25ನೇ ವರ್ಷಾಚರಣೆ ಮತ್ತು ಸ್ವಂತ ಕಟ್ಟಡದ ಉದ್ಘಾಟನೆಯ ಕ್ಷಣವನ್ನು ಎದುರು ನೋಡುತ್ತಿದೆ.
ಪರಿವರ್ತನೆ : ಹಿರೇಹಾಲಿವಾಣ ಗ್ರಾಮದಲ್ಲಿ ಬಡತನದ ರೇಖೆಗಿಂತ ಕೆಳಗಡೆ ಅನೇಕ ಕುಟುಂಬಗಳಿದ್ದು, ಅಲ್ಲಿನ ಜನರು ಅನೇಕ ಮೂಢ ನಂಬಿಕೆಗಳಿಗೆ ದಾಸರಾಗಿ ಕನಿಷ್ಟ ಜೀವನ ನಡೆಸುತ್ತಿದ್ದರು. ಈಶ್ವರೀಯ ವಿಶ್ವವಿದ್ಯಾಲಯವು ಇಂತಹ ಅನೇಕ ಕುಟುಂಬಗಳ ಪರಿವರ್ತನೆ ಮಾಡಿ ಅವರ ಜೀವನ ಪದ್ಧತಿಯನ್ನು ಬದಲಾಯಿಸಿದೆ. ಈಗ ನೂರಕ್ಕೂ ಹೆಚ್ಚು ಸಂಖ್ಯೆಯ ಸ್ತ್ರೀ – ಪುರುಷರು ಪ್ರತಿನಿತ್ಯ ರಾಜಯೋಗದ ತರಗತಿಗಳಲ್ಲಿ ಭಾಗವಹಿಸುವುದರ ಮೂಲಕ ಪರಮಾತ್ಮನ ಅರ್ಥಾತ್ ಈಶ್ವರೀಯ ಸಂದೇಶದ ಲಾಭ ಪಡೆಯುತ್ತಿದ್ದಾರೆ.
ಸ್ವಂತ ಕಟ್ಟಡ : ಮೂಲತಃ ಹಿರೇಹಾಲಿವಾಣ ಗ್ರಾಮಕ್ಕೆ ಹೊಂದಿ ಕೊಂಡಂತಿರುವ ಚಿಕ್ಕ ಕುರುಬರಹಳ್ಳಿ ಗ್ರಾಮದವರಾದ ಕೆ.ಆರ್.ಐ.ಡಿ.ಎಲ್. (ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಡೆಟ್) ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಎಸ್.ಜಿ. ಶಿವಕುಮಾರ್ ಅವರೂ ಸಹ, ಹಿರೇಹಾಲಿವಾಣದ ಬ್ರಹ್ಮಾಕುಮಾರೀಸ್ ಸಂಸ್ಥೆಯ ಅನೇಕ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದಾರೆ. ಪರಮಾತ್ಮನ ಸಂದೇಶ ಇನ್ನೂ ಹೆಚ್ಚಿನ ಜನರಿಗೆ ತಲುಪುವಂತಾಗಲು ಅನುಕೂಲವಾಗಲಿ ಎಂಬ ಸಂಕಲ್ಪ ಮಾಡಿದ ಎಸ್.ಜಿ. ಶಿವಕುಮಾರ್ ಅವರು, ಹಿರೇಹಾಲಿವಾಣ ಗ್ರಾಮದಲ್ಲಿ ಬ್ರಹ್ಮಾಕುಮಾರಿ ಸಂಸ್ಥೆಗೆ 82X35 ಅಳತೆಯ ನಿವೇಶನದಲ್ಲಿ ಕಟ್ಟಡವೊಂದನ್ನು ನಿರ್ಮಿಸಿ, ಈಶ್ವರೀಯ ವಿಶ್ವವಿದ್ಯಾಲಯಕ್ಕೆ ದಾನ ಮಾಡಿದ್ದಾರೆ.
ಎಸ್.ಜಿ. ಶಿವಕುಮಾರ್, ಮಲೇಬೆನ್ನೂರಿನ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಜಿ. ಕರಿಬಸಪ್ಪ ಮತ್ತು ಶ್ರೀಮತಿ ಸಿದ್ದಮ್ಮ (ಲೋಕಸಭಾ ಮಾಜಿ ಸದಸ್ಯರಾಗಿದ್ದ ದಿ. ಚನ್ನಯ್ಯ ಒಡೆಯರ್ ಅವರ ಸಹೋದರನ ಪುತ್ರಿ) ದಂಪತಿ ಪುತ್ರ. ಇವರು ಸುಮಾರು ಒಂದು ದಶಕದಿಂದ ಈಶ್ವರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾರೆ.
ಉದ್ಘಾಟನೆ : ಹಿರೇಹಾಲಿವಾಣದ ಬ್ರಹ್ಮಾಕುಮಾರೀಸ್ ಸಂಸ್ಥೆ ಶಾಖೆಯ 25ನೇ ವರ್ಷದ ರಜತ ಮಹೋತ್ಸವ ಮತ್ತು ಎಸ್.ಜಿ. ಶಿವಕುಮಾರ್ ಅವರು ಬ್ರಹ್ಮಾಕುಮಾರೀಸ್ ಸಂಸ್ಥೆಗೆ ನಿರ್ಮಿಸಿ ದಾನವಾಗಿ ಕೊಟ್ಟಿರುವ `ಗೀತಾ ಜ್ಞಾನಾಮೃತ ಭವನ’ ದ ಉದ್ಘಾಟನಾ ಸಮಾರಂಭವು ಇಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಈಶ್ವರೀಯ ವಿಶ್ವವಿದ್ಯಾಲಯದ ನವದೆಹಲಿಯ ಹರಿನಗರ ಉಪ ವಲಯದ ನಿರ್ದೇಶಕರೂ, ಹಿರಿಯ ರಾಜಯೋಗಿನಿಯರು ಆಗಿರುವ ಬ್ರಹ್ಮಾಕುಮಾರಿ ಶುಕ್ಲಾ ದೀದೀಜಿ ಅವರು ಗೀತಾ ಜ್ಞಾನಾಮೃತ ಭವನದ ಉದ್ಘಾಟನೆ ನೆರವೇರಿಸಲಿದ್ದಾರೆ. ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ನಿರ್ದೇಶಕರಾದ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋುಷಿ ಸಾನ್ನಿಧ್ಯ ವಹಿಸಲಿದ್ದು, ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಜ್ಯೋತಿ ಬೆಳಗಿಸುವರು. ಬ್ರಹ್ಮಾಕುಮಾರೀಸ್ ಸಂಸ್ಥೆಯ ಹುಬ್ಬಳ್ಳಿ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರುಗಳಾದ ಎಸ್. ರಾಮಪ್ಪ, ಹೆಚ್.ಎಸ್. ಶಿವಶಂಕರ್ ಅವರುಗಳು ಗೌರವಾನ್ವಿತ ಅತಿಥಿಗಳಾಗಿದ್ದು, ಬ್ರಹ್ಮಾಕುಮಾರೀಸ್ ಸಂಸ್ಥೆಯ ಬೆಂಗಳೂರಿನ ಜಯನಗರ ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಾಗರತ್ನಾಜಿ, ಬ್ರಹ್ಮಾಕುಮಾರೀಸ್ ಸಂಸ್ಥೆಯ ತಿರುವಣ್ಣಾಮಲೈ (ತಮಿಳುನಾಡು) ಸಂಚಾಲಕಾರದ ರಾಜಯೋಗಿನಿ ಬ್ರಹ್ಮಾಕುಮಾರಿ ಉಮಾಜೀ ಮತ್ತು ರಾಜಯೋಗಿ ಬ್ರಹ್ಮಕುಮಾರ ಪವನ್‌ಕುಮಾರ್ (ಅಮೆರಿಕಾ) ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಹಿರೇಹಾಲಿವಾಣ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಎಸ್.ಜಿ. ಲಕ್ಷ್ಮೀದೇವಿ ಮಂಜುನಾಥ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನೆ ಟ್ರಸ್ಟ್ ಯೋಜನಾಧಿಕಾರಿ ವಸಂತ ಎಸ್. ದೇವಾಡಿಗ, ಹಿರೇಹಾಲಿವಾಣದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್. ಹನುಮಂತಪ್ಪ, ಹರಿಹರ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ಹಾಲಿವಾಣ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈಶ್ವರೀಯ ವಿಶ್ವವಿದ್ಯಾಲಯದ ಶಿರಸಿ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜೀ ಮತ್ತು ದಾವಣಗೆರೆ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ.
ರಾಜಯೋಗ ಶಿಬಿರ : ಈ ಕಾರ್ಯಕ್ರಮದ ಸ್ಮರಣೆಗಾಗಿ ಬ್ರಹ್ಮಾಕುಮಾರೀಸ್ ಸಂಸ್ಥೆ ವತಿಯಿಂದ ಆಧ್ಯಾತ್ಮಿಕ ಜ್ಞಾನ-ಚಿಂತನ-ಮಂಥನ, ಗಾಯನ ಕಾರ್ಯಕ್ರಮವನ್ನು ಬರುವ ಅಕ್ಟೋಬರ್ 3 ರಿಂದ 6 ದಿನಗಳ ಕಾಲ ಪ್ರತಿನಿತ್ಯ ಸಂಜೆ 5 ರಿಂದ 7ರವರೆಗೆ ಹಿರೇಹಾಲಿವಾಣ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈಶ್ವರೀಯ ವಿಶ್ವವಿದ್ಯಾಲಯದ ಮಲೇಬೆನ್ನೂರು ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಬೆಂಗಳೂರಿನ ಬಿ.ಕೆ. ತಿಪ್ಪಯ್ಯ ಅವರು ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡುವರು.