ದಾವಣಗೆರೆ, ಅ.1- ಕಾವೇರಿ ವಿಚಾರವಾಗಿ ಸಂಕಷ್ಟ ಸೂತ್ರ ಜಾರಿಗೊಳಿಸಿ, ಕಾವೇರಿ ನೀರಿನ ವಿಷಯದಲ್ಲಿ ಪ್ರಧಾನಮಂತ್ರಿಗಳು ಮಧ್ಯೆ ಪ್ರವೇಶಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆ ಯುವ ಮೂಲಕ (ಟಿ.ಎ. ನಾರಾಯಣಗೌಡ ಬಣ) ರಕ್ತ ಚಳವಳಿ ನಡೆಸಿದರು.
ನಗರದ ಪಿ.ಜೆ. ಬಡಾವಣೆಯ ಪ್ರಯೋಗಾಲಯದಲ್ಲಿ ರಕ್ತ ಪತ್ರ ಚಳವಳಿ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ರೈತರಿಗೆ ಅನ್ಯಾಯವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿಗಳು ತಕ್ಷಣವೇ ಕರ್ನಾಟಕ, ತಮಿಳು ನಾಡು, ಕೇರಳ, ಪಾಂಡಿಚೆರಿ ಮುಖ್ಯಮಂತ್ರಿಗಳ ತುರ್ತು ಸಭೆ ಕರೆದು ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.ಮುಂಬರುವ ದಿನಗಳಲ್ಲಿ ರಾಜ್ಯದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಇದಲ್ಲದೇ ರಾಜ್ಯದ 28 ಜನ ಸಂಸದರು ಪ್ರಧಾನ ಮಂತ್ರಿಗಳ ಬಳಿ ನಿಯೋಗ ಹೋಗಿ ಕರ್ನಾಟಕದ ನೀರಿನ ಸ್ಥಿತಿಗತಿಗಳನ್ನು ಅವರಿಗೆ ಮನವರಿಕೆ ಮಾಡಿ ಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಸದರ ನಿವಾಸಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರವೇ ಪದಾಧಿಕಾರಿಗಳಾದ ಲೋಕೇಶ್, ಗೋಪಾಲ್, ಜಬೀವುಲ್ಲಾ, ದೇವರಮನಿ ಶಿವಕುಮಾರ್, ಪಿ. ರವಿಕುಮಾರ್, ಈಶ್ವರ್, ಮಹೇಶ್ವರಪ್ಪ, ಎಂ.ಡಿ. ರಫೀಕ್, ಖಾದರ್ ಬಾಷಾ, ರಫೀಕ್, ಮುಸ್ತಾಫಾ, ಬಾಷಾ, ದಾದಾಪೀರ್, ತನ್ವೀರ್ ಮತ್ತಿತರರಿದ್ದರು.