ಆಯುಷ್ಯದೊಂದಿಗೆ ಆರೋಗ್ಯವೂ ಉತ್ತಮವಾಗಿರಬೇಕು

ಆಯುಷ್ಯದೊಂದಿಗೆ ಆರೋಗ್ಯವೂ ಉತ್ತಮವಾಗಿರಬೇಕು

ಹಿರಿಯ ನಾಗರಿಕರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಪ್ರಭಾ ಮಲ್ಲಿಕಾರ್ಜುನ್ ಕಿವಿಮಾತು

ದಾವಣಗೆರೆ, ಅ. 1 – ಆಯುಷ್ಯ ಹೆಚ್ಚಾಗುವ ಜೊತೆಗೆ ಆರೋಗ್ಯವೂ ಉತ್ತಮವಾಗಿರಬೇಕು. ಇದಕ್ಕಾಗಿ 45 ವರ್ಷ ದಾಟಿದವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಎಸ್.ಎಸ್. ಕೇರ್‌ ಟ್ರಸ್ಟ್‌ನ ಟ್ರಸ್ಟಿ ಹಾಗೂ ಬಾಪೂಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ್ ಕಿವಿಮಾತು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಎಸ್.ಎಸ್. ಕೇರ್ ಟ್ರಸ್ಟ್, ಜಿಲ್ಲಾ ಹಿರಿಯ ನಾಗರಿಕರ ಸಂಘ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ, ಆದರ್ಶ ಸಮಾಜ ಕಾರ್ಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ನಡೆಸಲಾದ ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರು ಸಕ್ಕರೆ ಕಾಯಿಲೆ, ರಕ್ತದೊತ್ತಡಗಳಷ್ಟೇ ಅಲ್ಲದೇ ಕ್ಯಾನ್ಸರ್ ರೀತಿಯ ರೋಗಗಳ ನಿಯಮಿತ ತಪಾಸಣೆಗೆ ಒಳಗಾಗಬೇಕು. ದೇಹದ ತೂಕದ ಮೇಲೆ ನಿಗಾ ಇರಿಸುವ ಜೊತೆಗೆ, ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದವರು ತಿಳಿಸಿದರು.

ಹಿರಿಯ ನಾಗರಿಕರಿಗೆ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಇಂದು ಉಚಿತ ತಪಾಸಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ತಪಾಸಣೆ ಅಗತ್ಯವಿದ್ದಲ್ಲಿ ಬಾಪೂಜಿ ಒ.ಪಿ.ಡಿ. ವಿಭಾಗದಲ್ಲೂ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಉತ್ತಮ ಆರೋಗ್ಯ ಕಾಪಾಡಿಕೊಂಡಲ್ಲಿ ನಿವೃತ್ತಿಯ ನಂತರವೂ ಉತ್ಸಾಹದ ಜೀವನ ನಡೆಸಬಹುದು. ಇದಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ಉದಾಹರಣೆಯಾಗಿದ್ದಾರೆ. 93ರ ವಯಸ್ಸಿನಲ್ಲೂ ಅವರು ಜೀವನೋತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಭಾ ಮಲ್ಲಿಕಾರ್ಜುನ್ ಶ್ಲ್ಯಾಘಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಹಿರಿಯ ನಾಗರಿಕರ ಸಂಘದ ಗೌರವ ಕಾರ್ಯದರ್ಶಿ ಎಸ್. ಗುರುಮೂರ್ತಿ, ಜಿಲ್ಲೆಯಲ್ಲಿ 2.5 ಲಕ್ಷ ಹಿರಿಯ ನಾಗರಿಕರಿದ್ದಾರೆ. ಆದರೂ ಹೆಚ್ಚಿನವರು ಹಿರಿಯ ನಾಗರಿಕರ ಸಂಘಕ್ಕೆ ಸೇರ್ಪಡೆಯಾಗಿಲ್ಲ. ಅಂಥವರು ಸಂಘಕ್ಕೆ ಸೇರಬೇಕು ಎಂದು ಕರೆ ನೀಡಿದರು.

ಮುಂದಿನ ವರ್ಷ ಶಾಮನೂರು ಶಿವಶಂಕರಪ್ಪ ಅವರ ಜನ್ಮ ದಿನದಂದೇ ಜಿಲ್ಲಾ ಮಟ್ಟದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಆಚರಿಸಬೇಕು ಎಂದು ಸಲಹೆ ನೀಡಿದರು.

ವೇದಿಕೆಯ ಮೇಲೆ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಸ್.ಟಿ. ಕುಸುಮಶ್ರೇಷ್ಠಿ, ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಕುಮಾರ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಕೆ. ಪ್ರಕಾಶ್ ಉಪಸ್ಥಿತರಿದ್ದರು.

error: Content is protected !!