ದಿನಗೂಲಿ ನೌಕರರ, ಗುತ್ತಿಗೆದಾರರ ನಡುವೆ ಅ.3ಕ್ಕೆ ಒಪ್ಪಂದ

ದಿನಗೂಲಿ ನೌಕರರ, ಗುತ್ತಿಗೆದಾರರ ನಡುವೆ ಅ.3ಕ್ಕೆ ಒಪ್ಪಂದ

ರೈತರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ : ದಿನಗೂಲಿ ನೌಕರರಿಗೆ ಮುಖಂಡರ ಮನವಿ

ಮಲೇಬೆನ್ನೂರು, ಸೆ.29- 5 ತಿಂಗಳ ಬಾಕಿ ವೇತನ ಹಾಗೂ ಇಪಿಎಫ್‌, ಇಎಸ್‌ಐಗಳ ವಿಷಯ ಕುರಿತು ಇಲ್ಲಿನ ಭದ್ರಾ ನಾಲಾ ನಂ-3 ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಕಛೇರಿ ವ್ಯಾಪ್ತಿಯ ದಿನಗೂಲಿ ನೌಕರರ ಮತ್ತು ಇವರಿಗೆ ವೇತನ ನೀಡುವ ಗುತ್ತಿಗೆದಾರರ ನಡುವೆ ವ್ಯತ್ಯಾಸ ಆಗಿದ್ದರಿಂದ ದಿನಗೂಲಿ ನೌಕರರು ಗುರುವಾರದಿಂದ ಮತ್ತೆ ಪ್ರತಿಭಟನೆ ಆರಂಭಿಸಿದ್ದರು.

ಈ ಬಗ್ಗೆ ಶುಕ್ರವಾರ ಇಲ್ಲಿನ ನೀರಾವರಿ ಕಛೇರಿ ಆವರಣದಲ್ಲಿ ದಿನಗೂಲಿ ನೌಕರರು ಸ್ಥಳಕ್ಕೆ ಆಗಮಿ ಸಿದ್ದ ಕಾಂಗ್ರೆಸ್‌ ಮುಖಂಡ ನಂದಿಗಾವಿ ಶ್ರೀನಿವಾಸ್‌, ಭದ್ರಾ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ, ಮುಖಂಡರಾದ ಮುದೇಗೌಡ್ರ ತಿಪ್ಪೇಶ್‌, ಸುರೇಶ್‌ ಹಾದಿಮನಿ, ಜಿ. ಮಂಜುನಾಥ್‌ ಪಟೇಲ್‌, ನಂದಿ ತಾವರೆ ತಿಪ್ಪೇರುದ್ರಪ್ಪ, ಜಿಗಳಿ ಚಂದ್ರಪ್ಪ, ಮಲ್ಲನಾಯ್ಕ ನಹಳ್ಳಿ ಶೇಖರಪ್ಪ, ನಂದಿತಾವರೆ ಮುರುಗೇಂದ್ರಯ್ಯ ಮತ್ತಿತರರ ಸಮ್ಮುಖದಲ್ಲಿ ಗುತ್ತಿಗೆದಾರನ 10 ನಿಬಂಧನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ನಂತರ 4 ನಿಬಂಧನೆಗಳನ್ನು ಕೈ ಬಿಟ್ಟು 6 ನಿಬಂಧ ನೆಗಳಿಗೆ ದಿನಗೂಲಿ ನೌಕರರು ಸಮ್ಮತಿ ಸೂಚಿಸಿದರು.

ಈ ವಿಷಯವನ್ನು ಕಾರ್ಯಪಾಲಕ ಇಂಜಿನಿ ಯರ್‌ ಮಂಜುನಾಥ್‌ ಅವರು ಗುತ್ತಿಗೆದಾರನಿಗೆ ಫೋನ್‌ ಮಾಡಿ ತಿಳಿಸಿದಾಗ ಆತ ಈ ಬಗ್ಗೆ ವಕೀಲರ ಜೊತೆ ಚರ್ಚಿಸಿ, ಅ. 3 ರ ಮಂಗಳವಾರ ಒಪ್ಪಂದ ಮಾಡಿಕೊಳ್ಳುತ್ತೇನೆಂಬ ಭರವಸೆ ನೀಡಿದಾಗ ದಿನ ಗೂಲಿ ನೌಕರರು ಕರ್ತವ್ಯಕ್ಕೆ ತೆರಳಲು ಒಪ್ಪಿದರು.

ಈ ವೇಳೆ ಮಾತನಾಡಿದ ದ್ಯಾವಪ್ಪ ರೆಡ್ಡಿ ಅವರು, ಅಚ್ಚುಕಟ್ಟಿನಲ್ಲಿ ಭತ್ತದ ನಾಟಿ ಮಾಡಿರುವ ಎಲ್ಲಾ ರೈತರಿಗೆ ನೀರು ತಲುಪಿಸಲು ಹಗಲಿರುಳು ಶ್ರಮ ವಹಿಸಿ ಕೆಲಸ ಮಾಡುವಂತೆ ದಿನಗೂಲಿ ನೌಕರರಲ್ಲಿ ಮನವಿ ಮಾಡಿದರು.

ನಂದಿಗಾವಿ ಶ್ರೀನಿವಾಸ್‌ ಮಾತನಾಡಿ, ನಿಮ್ಮ ಬಾಕಿ ವೇತನದ ಸಮಸ್ಯೆ ಅತಿ ಶೀಘ್ರದಲ್ಲಿ ಬಗೆಹರಿಯಲಿದೆ. ಆ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ನೀವು ಈ ಕ್ಷಣದಿಂದಲೇ ಕಾಲುವೆಗಳ ಮೇಲೆ ಸಂಚರಿಸಿ, ನೀರಿನ ನಿರ್ವಹಣೆ ಮಾಡಿ ಎಂದು ದಿನಗೂಲಿ ನೌಕರರಿಗೆ ಹೇಳಿದರು.

ಎಇಇಗಳಾದ ಧನಂಜಯ ನಾಯ್ಕ, ರಾಜಕುಮಾರ್‌, ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಆಂಜನೇಯ, ಪುರಸಭೆ ಮಾಜಿ ಸದಸ್ಯ ಎ. ಆರೀಫ್‌ ಅಲಿ, ಕೆ.ಪಿ. ಗಂಗಾಧರ್‌, ಪಿ.ಆರ್. ಕುಮಾರ್‌ ಸೇರಿದಂತೆ 150 ಕ್ಕೂ ಹೆಚ್ಚು ದಿನಗೂಲಿ ನೌಕರರು ಮತ್ತು ರೈತರು ಹಾಜರಿದ್ದರು.

ರೊಟೇಷನ್‌ ಪದ್ಧತಿ ಜಾರಿಗೆ ಒತ್ತಾಯ : ಮೇಲ್ಭಾಗದಲ್ಲಿ ನೀರಿನ ರೊಟೇಷನ್‌ ಪದ್ಧತಿ ಜಾರಿ ಮಾಡಿದರೆ ಮಾತ್ರ ಕೆ.ಎನ್‌. ಹಳ್ಳಿ, ಹೊಳೆ ಸಿರಿಗೆರೆ, ಕೊಕ್ಕನೂರು, ಕಮಲಾಪುರ, ಭಾನುವಳ್ಳಿ, ಯಲವಟ್ಟಿ, ಜಿಗಳಿ, ನಂದಿತಾವರೆ, ವಿನಾಯಕ ನಗರ ಕ್ಯಾಂಪ್ ಗ್ರಾಮಗಳ ಜಮೀನುಗಳಿಗೆ ಕಾಲುವೆಗಳಲ್ಲಿ ನೀರು ಬರಲಿದೆ. ಇಲ್ಲದಿದ್ದರೆ ನೀರಿನ ಸಮಸ್ಯೆ ಹೆಚ್ಚಾಗಲಿದೆ ಎಂದು ಹೊಳೆ ಸಿರಿಗೆರೆಯ ತಿಪ್ಪೇರುದ್ರಪ್ಪ, ಸಿ. ಪ್ರಭು, ಎನ್. ದೇವರಾಜ್‌, ಬಿ. ರಾಜು, ಕಮಲಾಪುರದ ಗಂಗಾಧರ್‌, ರಮೇಶ್‌, ಕೆ.ಎನ್‌. ಹಳ್ಳಿಯ ಅಶೋಕ್‌, ರಾಮಣ್ಣ ಮತ್ತಿತರರು ಈ ವೇಳೆ ಇಂಜಿನಿಯರ್‌ ಅವರನ್ನು ಒತ್ತಾಯಿಸಿದರು.

error: Content is protected !!