ಕೊಂಡಕುರಿ ಅಭಯಾರಣ್ಯ ಸುಂದರ ಪ್ರವಾಸಿ ತಾಣ : ಜಗಳೂರು ಶಾಸಕ ಬಿ.ದೇವೇಂದ್ರಪ್ಪ

ಕೊಂಡಕುರಿ ಅಭಯಾರಣ್ಯ ಸುಂದರ ಪ್ರವಾಸಿ ತಾಣ : ಜಗಳೂರು ಶಾಸಕ ಬಿ.ದೇವೇಂದ್ರಪ್ಪ

ಜಗಳೂರು, ಸೆ.28- ತಾಲ್ಲೂಕಿನಲ್ಲಿ ದೇಶದಲ್ಲಿಯೇ ಏಕೈಕ ಕೊಂಡಕುರಿ ಅಭಯಾರಣ್ಯವಾಗಿರುವ ತಾಲ್ಲೂಕಿನ ರಂಗಯ್ಯನ ದುರ್ಗ ಅರಣ್ಯ ಪ್ರದೇಶವಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಕನ್ನಡ ಮತ್ತು ಸಂಸ್ಕೃತಿ ಭವನದಲ್ಲಿ ಪಟ್ಟಣ ಪಂಚಾಯಿತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ  ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಮತ್ತು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅರ್ಥಪೂರ್ಣವಾಗಿದೆ.ಇದೀಗ ಸರ್ಕಾರದ ಕಾಳಜಿಯಿಂದ ಪ್ರವಾಸಿ ತಾಣದಂತೆ ಕೈಬೀಸಿ ಕರೆಯುತ್ತಿದೆ.ನಾನು ಇದರ ಅಂಚಿನಲ್ಲಿರುವ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಜನಿಸಿ, ಬಾಲ್ಯದಲ್ಲಿ  ಕಾಡಿನಲ್ಲಿನ ಸ್ವಾಭಾವಿಕವಾಗಿ ಬೆಳೆದ ಕವಳೆ, ಬಿಕ್ಕೆ, ಹಣ್ಣು-ಹಂಪಲುಗಳನ್ನು ಸವಿದಿದ್ದೇನೆ ಎಂದು ಬಾಲ್ಯದ ನೆನಪು ಮೆಲುಕು ಹಾಕಿದರು.

ಭಾರತದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ವಿಶ್ವಕ್ಕೇ ಸಾರಿದೆ. ದೇಶದ ಜಲ, ನೆಲ, ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಇದಕ್ಕೆ ಶಿಕ್ಷಣ, ಇಚ್ಛಾಶಕ್ತಿ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಪ್ರತಿ ತಿಂಗಳಿಗೊಮ್ಮೆ ವಿವಿಧ ಸಂಘ-ಸಂಸ್ಥೆಗಳ ಜೊತೆಗೂಡಿ ಒಂದೊಂದು ವಾರ್ಡ್‌ನಂತೆ ಸ್ವಚ್ಛತೆಗೊಳಿಸಲಾಗುವುದು. ಅಲ್ಲದೆ ಪಟ್ಟಣದಲ್ಲಿನ ಸಾರ್ವಜನಿಕ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.

ಇಡೀ ಪಟ್ಟಣವನ್ನು ಕೇವಲ ಬೆರಳೆಣಿಕೆ ಸಂಖ್ಯೆಯ ಪೌರ ಕಾರ್ಮಿಕರು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಅವರ ಸೇವೆಯನ್ನು ಪರಿಗಣಿಸಿ ನೈತಿಕ ಬೆಂಬಲ ವ್ಯಕ್ತಪಡಿಸಬೇಕು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಹಕರಿಸಿದರೆ ಪಟ್ಟಣವನ್ನು ಸುಂದರ, ಸ್ವಚ್ಛ ನಗರವನ್ನಾಗಿಸಬಹುದು ಎಂದು ಹೇಳಿದರು.

ಜಿಲ್ಲಾ ಪರಿಸರ ಅಧಿಕಾರಿ ಡಾ. ಲಕ್ಷ್ಮಿಕಾಂತ ಮಾತನಾಡಿ, ಪ್ರತಿಯೊಂದು ಮನೆಯಲ್ಲಿ ಸಕಾಲದಲ್ಲಿ ಕಸವನ್ನು ವಿಲೇವಾರಿ ಮಾಡಬೇಕು. ಅಲ್ಲದೆ ಪರಿಸರ ಹಾಗೂ ಜೀವ ಸಂಕುಲಕ್ಕೆ ಆಪತ್ತು ಉಂಟುಮಾಡುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪರಿಸರದಲ್ಲಿ ಅತಿ ಹೆಚ್ಚಾಗಿ ಗಿಡ-ಮರಗಳನ್ನು ಬೆಳೆಸಬೇಕು  ಎಂದು ತಿಳಿಸಿದರು.

ಜ್ಞಾನತರಂಗಿಣಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಪಿ.ಎಸ್.ಅರವಿಂದನ್ ಮಾತನಾಡಿ, ಖಾಲಿ ನಿವೇಶನದಲ್ಲಿ ಕಸ, ಘನ ತ್ಯಾಜ್ಯ ವಸ್ತುಗಳ ವಿಲೇವಾರಿಯಿಂದ ಜಲಮಾಲಿನ್ಯ, ವಾಯುಮಾಲಿನ್ಯ ಉಂಟಾಗುತ್ತವೆ ಎಂದರು.

ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರ ವರೆಗೆ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ ತಿಳಿಸಿದರು.

ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ, ಪದಾಧಿಕಾರಿಗಳಾದ  ನಾಗಲಿಂಗಪ್ಪ, ಓಬಣ್ಣ, ಗೀತಾ, ಮಾರಪ್ಪ, ಎ.ಪಿ.ನಿಂಗಪ್ಪ, ಬಡಪ್ಪ, ಆದಂ, ಚೌಡಮ್ಮ, ಸುಮ, ಪ.ಪಂ. ಸದಸ್ಯ ರಮೇಶ್ ರೆಡ್ಡಿ, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಪೀರ್, ಪ.ಪಂ ಆರೋಗ್ಯ ನಿರೀಕ್ಷಕ ಖಿಫಾಯತ್, ಮುಂತಾದವರು ಭಾಗವಹಿಸಿದ್ದರು.

error: Content is protected !!