ಕೆರೆ ನೀರಿನಲ್ಲಿ ನಿಂತು ಕೆರೆ ನೀರು ಮಾಲಿನ್ಯ ಮಾಡದಂತೆ ಒತ್ತಾಯಿಸಿ `ಕೆರೆ ರಕ್ಷಿಸಿ’ ಎಂದು ಘೋಷಣೆ ಕೂಗಿದ ಗ್ರಾಮಸ್ಥರು
ಮಲೇಬೆನ್ನೂರು, ಸೆ.19 – ಕೊಮಾರನಹಳ್ಳಿಯ ಐತಿಹಾಸಿಕ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ ಕೆರೆಗೆ ಜಲ ಮೂಲವಾಗಿರುವ ಗುಡ್ಡಗಾಡಿನಲ್ಲಿ ಮಲೇಬೆನ್ನೂರು ಪುರಸಭೆಯವರು ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಯತ್ನ ನಡೆಸಿರುವುದನ್ನು ವಿರೋಧಿಸಿ, ಕೊಮಾರನಹಳ್ಳಿ ಗ್ರಾಮಸ್ಥರು ಇತ್ತೀಚಿಗೆ ಪ್ರತಿಭಟನೆ ನಡೆಸಿದರು.
ಕೆರೆ ನೀರಿನಲ್ಲಿ ನಿಂತ ಗ್ರಾಮಸ್ಥರು ರಕ್ಷಿಸಿ, ರಕ್ಷಿಸಿ, ಉಳಿಸಿಕೊಡಿ : ಕೆರೆಯನ್ನು ರಕ್ಷಿಸಿ, ಉಳಿಸಿಕೊಡಿ ಪ್ರಕೃತಿ ಉಳಿಸಿಕೊಡಿ, ಬೇಡ ಬೇಡ ಘನ ತ್ಯಾಜ್ಯ ಘಟಕ ಬೇಡ ಎಂದು ಘೋಷಣೆಗಳನ್ನು ಕೂಗಿದರು. ನಂತರ ಪುರಸಭೆ ಮುಖ್ಯಾಧಿಕಾರಿ ಸುರೇಶ್‌ಗೆ ಮನವಿ ಪತ್ರ ನೀಡಿದರು.
ಕೊಮಾರನಹಳ್ಳಿಯ ಐತಿಹಾಸಿಕ ಹೆಳವನಕಟ್ಟೆ ಕೆರೆಯ ಸುತ್ತ ಹಚ್ಚ ಹಸಿರಿನಿಂದ ಕಂಗೊಳಿಸುವ ಗುಡ್ಡಗಾಡುಗಳಿಂದ ಕೂಡಿದ ಸುಂದರ ಪ್ರಕೃತಿ ತಾಣವಿದ್ದು, ಇದನ್ನು ಪ್ರವಾಸಿ ತಾಣ ಮಾಡುವಂತೆ ಗ್ರಾಮಸ್ಥರಾದ ನಾವುಗಳು ಅನೇಕ ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಇದುವರೆಗೂ ಪ್ರವಾಸಿ ತಾಣ ಕಾರ್ಯಗತಗೊಂಡಿಲ್ಲ. ಇದೀಗ ಇಂತಹ ಐತಿ ಹಾಸಿಕ ಕೆರೆಯ ನೀರನ್ನು ಮಾಲಿನ್ಯ ಮಾಡಲು ಕೆಲ ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ವರ್ಷಗಳಿಂದ ದನಕರುಗಳು, ಸುತ್ತಲಿನ ಕಾಡಿನಲ್ಲಿನ ಪ್ರಾಣಿ, ಪಕ್ಷಿಗಳು ಈ ಕೆರೆ ನೀರನ್ನೇ ಆಶ್ರಯಿಸಿವೆ. ಒಂದು ವೇಳೆ ಕೆರೆ ನೀರು ಮಾಲಿನ್ಯವಾದರೆ, ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ಕುತ್ತು ಸಂಭವಿಸಲಿದೆ ಎಂದು ಪ್ರತಿಭಟನಾಕಾರರು ಆತಂಕ ಸಂಕುಲಕ್ಕೆ ಆತಂಕ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಅಕ್ಕ ಪಕ್ಕದ ಗ್ರಾಮಗಳಿಗೆ ಈ ಕೆರೆ ಕುಡಿಯುವ ನೀರನ್ನಾಗಿಯೂ ಬಳಸುವ ಸಾಧ್ಯತೆಯಿದೆ. ಈ ಕೆರೆ ನೀರನ್ನು ಮಾಲಿನ್ಯವಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈಗಾಗಲೇ ವಶಪಡಿಸಿಕೊಂಡಿರುವ ಸ.ನಂ.59ಲ್ಲಿನ 2.20 ಎಕರೆ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ಕೊಮಾರನಹಳ್ಳಿ ಗುಡ್ಡಗಾಡಿನ ಯಾವುದೇ ಪ್ರದೇಶದಲ್ಲೂ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಬಾರದು. ಜಿಲ್ಲಾಧಿಕಾರಿಗಳು ಕೂಡಲೇ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಇಲ್ಲಿ ಮಂಜೂರು ಮಾಡಿರುವ ಜಮೀನಿನ ಆದೇಶವನ್ನು ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿದರು.
ಪ್ರತಿಭಟನೆಯಲ್ಲಿ ಐರಣಿ ಪುಟ್ಟಪ್ಪ, ಎಸ್.ಡಿ.ರಂಗನಾಥ್, ಯು.ಪರಮೇಶಣ್ಣ, ಬಸವರಾಜ್, ಪರಮೇಶ್ವರನಾಯ್ಕ, ಸಂತೋಷ್, ಮಂಜಪ್ಪ, ಭರಣ, ಜಿ.ಪ್ರಕಾಶ್, ಶಿವನಾಯ್ಕ, ಯು. ಅಣ್ಣಪ್ಪ ಸಾರಥಿ ಪ್ರಕಾಶ್, ಅರಕೆರೆ ಸಿದ್ದಲಿಂಗಪ್ಪ ದಲ್ಲಾಳಿ ಮಂಜಪ್ಪ, ಶಿವು ಎನ್, ರೆಡ್ಡಿ ಹನುಮಂತಪ್ಪ, ಕೆ.ಎನ್. ಸಂತೋಷ್‌ಕುಮಾರ್, ಚೇತನ್ ಬಿ.ಎಂ., ಅಣ್ಣಯ್ಯ ಮತ್ತಿತರರು ಇದ್ದರು.