ತಾ.ಮಟ್ಟದ ಕ್ರೀಡಾಕೂಟದಲ್ಲಿ ಶಾಸಕ ಬಿ.ದೇವೇಂದ್ರಪ್ಪ
ಜಗಳೂರು,ಸೆ.19- ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ, ಆಸಕ್ತಿದಾಯಕ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿ ಮಾತು ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ಗುರುಸಿದ್ದನಗೌಡ ಅವರ ಆಡಳಿತಾವಧಿಯಲ್ಲಿ ನಿರ್ಮಿಸಿರುವ ತಾಲ್ಲೂಕು ಕ್ರೀಡಾಂಗಣ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಮುಂದಿನ ದಿನಗಳಲ್ಲಿ ಕ್ರೀಡಾ ಸಚಿವರ ಬಳಿ ಮನವಿ ಮಾಡಿ, ಹೆಚ್ಚು ಅನುದಾನ ತರುವ ಮೂಲಕ ಒಳಾಂಗಣ ಮತ್ತು ಹೊರಾಂಗಣ ಮೈದಾನ, ಸಿಂಥೆಟಿಕ್ ಟ್ರ್ಯಾಕ್ ,ಸುತ್ತಲೂ ಗಿಡ ಮರಗಳು ಹಸಿರಿನಿಂದ ಕಂಗೊ ಳಿಸುವಂತೆ ಅಭಿವೃದ್ಧಿ ಪಡಿಸುವುದಾಗಿ ಭರವಸೆ ವ್ಯಕ್ತಪಡಿಸಿದರು. ಕಳೆದುಕೊಂಡ ಸಂಪತ್ತನ್ನು ಗಳಿಸಬ ಹುದು. ಆದರೆ ಅನಾರೋಗ್ಯ ಪೀಡಿ ತರು ಆರೋಗ್ಯ ಪಡೆಯಲು ಅಸಾಧ್ಯ.ಸದೃಢ ದೇಹದಲ್ಲಿ ಸದೃಢ ಮನಸ್ಸು ಸಾಧ್ಯ ಎಂದರು.
ಕ್ರಿಡಾಕೂಟದಲ್ಲಿ ತಾಲೂಕಿನ ಪ್ರತಿ ಕಾಲೇಜುಗಳ ಕ್ರೀಡಾಪಟುಗಳು ತೀರ್ಪುಗಾರರ ಮಕ್ಕಳಿದ್ದಂತೆ. ತಮ್ಮ ತೀರ್ಪು ಪಾರದರ್ಶಕವಾಗಿರಲಿ. ಸೋಲು -ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಸ್.ಜಿ.ಕರಿಸಿದ್ದಪ್ಪ ಮಾತನಾಡಿ, ಬರದ ನಾಡಿನಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭಿಸಲು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು. ಈ ಮನವಿ ಸ್ವೀಕರಿಸಿದ ಶಾಸಕರು, ಗ್ರಾಮದಲ್ಲಿ ಸರಕಾರಿ ಪಿಯು ಕಾಲೇಜು ಆರಂಭಿಸಲು ಅಗತ್ಯ ಕ್ರಮ ಗಳನ್ನು ಕೈಗೊಳ್ಳಲು ಜಿಲ್ಲಾ ಉಪನಿರ್ದೇಶಕ ಕರಿಸಿದ್ದಪ್ಪ ಅವರಿಗೆ ಸೂಚಿಸಿದರು.
ಸಂದರ್ಭದಲ್ಲಿ ಬಿಇಓ ಹಾಲಮೂರ್ತಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಜಗದೀಶ್, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ರಾವ್, ಪ.ಪಂ. ಸದಸ್ಯ ರಮೇಶ್ ರೆಡ್ಡಿ, ಉಪನ್ಯಾಸಕರಾದ ಎ.ಎಲ್.ತಿಪ್ಪೇಸ್ವಾಮಿ, ಮಂಜುನಾಥ ರೆಡ್ಡಿ, ಕರಿಬಸಪ್ಪ, ಎ.ಪಿ.ನಿಂಗಪ್ಪ, ಮುಖಂಡರಾದ ಓಮಣ್ಣ, ಪಲ್ಲಾಗಟ್ಟೆ ಶೇಖರಪ್ಪ, ಚಿತ್ತಪ್ಪ ಮುಂತಾದವರು ಇದ್ದರು.