ಜಗಳೂರು, ಸೆ. 15 – ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಛೇರಿಗೆ ತೆರಳಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿಯೇ ಕಟ್ಟಡ ಕಾರ್ಮಿಕ ಮತ್ತು ಕಲ್ಯಾಣ ಇಲಾಖೆಯಿಂದ ಪರ್ಯಾಯವಾಗಿ ಶಿಶುಪಾಲನಾ ಕೇಂದ್ರ ಹಾಗೂ ಶಾಲಾ ಪೂರ್ವ ಶಿಕ್ಷಣ ತರಬೇತಿ ಕೇಂದ್ರಗಳನ್ನು ತೆರಯುವ ಆದೇಶವನ್ನು ಕೂಡಲೇ ರದ್ದುಪಡಿಸ ಬೇಕು. ಅಲ್ಲದೆ 48 ವರ್ಷಗಳಿಂದ ಐಸಿಡಿಎಸ್ ಯೋಜನೆಯಡಿ 6 ವರ್ಷದ ವಯೋಮಾ ನದವರಿಗೆ ಶಿಶು ಅಭಿವೃದ್ದಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಲಾಲನೆ ಪಾಲನೆ, ಪೌಷ್ಠಿಕ ಆಹಾರ ಇತ್ಯಾದಿ ಸೇವೆಗಳನ್ನು ನಡೆಸುತ್ತಾ ಬಂದಿದ್ದು ಮುಂದುವರೆಸಬೇಕು. ಅಲ್ಲದೆ ಕಾರ್ಯಕರ್ತೆಯರಿಗೆ 15000 , ಸಹಾಯಕಿಯರಿಗೆ 10000 ಹಾಗೂ ನಿವೃತ್ತಿಹೊಂದಿದವರಿಗೆ, 3ಲಕ್ಷ ಇಡಿಗಂಟು ನೀಡುವ 6 ನೇ ವೇತನದ ಭರವಸೆಯನ್ನು ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ತಾಲ್ಲೂಕು ಪದಾಧಿಕಾರಿಗಳಾದ ಮಹಮ್ಮದ್ ಭಾಷಾ, ಸುಶೀಲಮ್ಮ, ಭರಮಕ್ಕ, ಹಾಲಮ್ಮ, ಗೌರಮ್ಮ, ಶಶಿಕಲಾ, ವೀರಣ್ಣ, ಮಾದಿಹಳ್ಳಿ ಮಂಜಪ್ಪ,ಮಂಜಮ್ಮ ಸೇರಿದಂತೆ ನೂರಾರು ಕಾರ್ಯಕರ್ತೆಯರು ಭಾಗವಹಿಸಿದ್ದರು.