ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ದಾಸೋಹ ಮಠದ ಆವರಣದಲ್ಲಿ ಶರಣ ಬಸವೇಶ್ವರ ಸ್ವಾಮಿಯ ಉದ್ದೇಶಿತ ನೂತನ ಮಠ, ದೇವಸ್ಥಾನ ನಿರ್ಮಾಣ, ಆಕರ್ಷಕ ಮಹಾದ್ವಾರ, ಕಲ್ಯಾಣಿ, ಮಠದ ಪ್ರಾಂಗಣದ ನವೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಶ್ರೀ ಮಲ್ಲಿಕಾರ್ಜುನ ದೇವರು
ಜಗಳೂರು, ಸೆ. 5- ಪುಣ್ಯದ ಕೆಲಸ ಮಾಡಲು ಶುಭ, ಅಶುಭ ಎಂದು ಭಾವಿಸದೇ ಕಾರ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಬೆಂಗಳೂರಿನ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಶ್ರೀ ಮಲ್ಲಿಕಾರ್ಜುನ ದೇವರು ಹೇಳಿದರು.
ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ದಾಸೋಹ ಮಠದ ಆವರಣದಲ್ಲಿ ನಡೆದ ಶರಣಬಸವೇಶ್ವರ ಸ್ವಾಮಿಯ ಉದ್ದೇಶಿತ ನೂತನ ಮಠ, ದೇವಸ್ಥಾನ ನಿರ್ಮಾಣ, ಆಕರ್ಷಕ ಮಹಾದ್ವಾರ, ಕಲ್ಯಾಣಿ ಹಾಗೂ ಮಠದ ಪ್ರಾಂಗಣದ ನವೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಹಲವಾರು ಸಿದ್ಧಿ ಪುರುಷರು, ಸಾಧಕರು ನಡೆದಾಡಿದ ಪುಣ್ಯಸ್ಥಳವಾಗಿದ್ದು, ಮಠಗಳಲ್ಲಿ ದಾಸೋಹದ ಜೊತೆಗೆ ಶೈಕ್ಷಣಿಕ ಕ್ರಾಂತಿಯನ್ನು ಮಾಡುವಂತಹ ಕೆಲಸಗಳು ನಡೆಯುತ್ತಿವೆ. ಬರದ ನಾಡಿನಲ್ಲಿರುವ ಈ ಗ್ರಾಮದಲ್ಲಿ ಅತೀ ಪುರಾತನವಾಗಿ ಶರಣ ಮಠವನ್ನು ಸ್ಥಾಪಿಸಿ, ಹಲವಾರು ಸೇವಾ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಮಾಜಿ ಶಾಸಕ ಹಾಗೂ ಮಠ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಹೆಚ್.ಪಿ. ರಾಜೇಶ್ ಮಾತನಾಡಿ, ಮಠದ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಮಾಡಿದ್ದು ನನಗೆ ನೀಡಿರುವ ದೊಡ್ಡ ಜವಾಬ್ದಾರಿಯಾಗಿದ್ದು, ಮಠವು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸರ್ವ ಸಮುದಾಯಕ್ಕೆ ಸೇರಿದೆ.
ಮಠವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಕಾನಮಡುಗಿನ ಶರಣ ಬಸವೇಶ್ವರ ದಾಸೋಹ ಮಠದ ಧರ್ಮದರ್ಶಿಗಳಾದ ಐರ್ಮಡಿ ಶರಣಾರ್ಯರು ಮಾತನಾಡಿ, ಬರೀ ದಾಸೋಹಕ್ಕೆ ಸೀಮಿತವಾಗದೆ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದೆ ಎಂದರು.
ಶ್ರೀಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಬೆಂಗಳೂರಿನಲ್ಲಿ ನಡೆಯಿತು. ಬದುಕು ಕಟ್ಟಿಕೊಳ್ಳಲು ಬೆಂಗಳೂರಿನಲ್ಲಿ ನೆಲೆಸಿರುವ ಭಕ್ತರೊಂದಿಗೆ ಸಭೆ ನಡೆಸಿದ್ದು, ಅವರು ದೇಣಿಗೆ ಸಹ ನೀಡಿದ್ದಾರೆ ಎಂದರು.
ಗ್ರಾಮದ ಮುಖಂಡ, ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿ, ಮಹಾಪೋಷಕರಾಗಿ, ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಇದ್ದಾರೆ. ವಾಗ್ದಾನ ಮಾಡಿದ ಭಕ್ತರು ಶೀಘ್ರವಾಗಿ ಸ್ವ ಇಚ್ಛೆಯಿಂದ ಹಣ ದೇಣಿಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಎಸ್. ವೇಣುಗೋಪಾಲ್ ರೆಡ್ಡಿ, ಯು.ಜಿ. ಶಿವಕುಮಾರ್, ಕಿತ್ತೂರು ಜಯ್ಯಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ವೀರೇಶ್, ಸೊಸೈಟಿ ಅಧ್ಯಕ್ಷ ಪ್ರಕಾಶ್, ಅಭಿಯಂತರ ಪುರುಷೋತ್ತಮ, ಹನುಮಂತಾಪುರ ಚಿತ್ತಣ್ಣ ಸೇರಿದಂತೆ, ಇತರರು ಉಪಸ್ಥಿತರಿದ್ದರು.