ಚಿತ್ರದುರ್ಗ, ಆ. 29- ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಜಮೀನುಗಳಿಗೆ ಮಂಗಳವಾರ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.
ತಾಲ್ಲೂಕಿನ ವಿಜಯಪುರ ಹಾಗೂ ಲಕ್ಷ್ಮಿಸಾಗರ ಗ್ರಾಮದ ಮೆಕ್ಕೆಜೋಳ, ಶೇಂಗಾ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಮಾಹಿತಿ ಪಡೆದರು.
ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಮಳೆ ಬೀಳುವ ನಿರೀಕ್ಷೆ ಇತ್ತು. ಆದರೆ ರಾಜ್ಯದಲ್ಲಿ ಈ ತಿಂಗಳು ಶೇ. 99 ರಷ್ಟು ಮಳೆ ಕೊರತೆಯಾಗಿದೆ. 130 ತಾಲ್ಲೂಕುಗಳಲ್ಲಿ ಬರ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ. 30 ರಂದು ಈ ವರದಿ ಸರ್ಕಾರದ ಕೈ ಸೇರಲಿದ್ದು, ಇದನ್ನು ಆಧರಿಸಿ ಬರ ಘೋಷಣೆ ಕುರಿತು ಸೆಪ್ಟೆಂಬರ್ ಮೊದಲ ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಶೇ.93 ರಷ್ಟು ಬಿತ್ತನೆಯಾಗಿದೆ. ಶೇ.30 ರಷ್ಟು ಮಳೆ ಕೊರತೆ ಕಂಡುಬಂದರೆ ಬರ ಎಂದು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೊದಲಿನಿಂದಲೂ ಚಿತ್ರದುರ್ಗ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ರಾಜ್ಯದ ಮಧ್ಯೆ ಇರುವ ಜಿಲ್ಲೆಯ ರೈತರ ಸ್ಥಿತಿ ಅರಿಯುವ ಸಲುವಾಗಿಯೇ ಜಿಲ್ಲಾ ಮಂತ್ರಿಗಳು ಹಾಗೂ ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ. ವಾಸ್ತವ ವರದಿ ಬಂದ ನಂತರ ಬರ ಪೀಡಿತ ತಾಲ್ಲೂಕುಗಳ ಸಂಖ್ಯೆ ಹೆಚ್ಚು ಕಡಿಮೆಯಾಗಲಿದೆ. ಬರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಯಾವುದಾದರು ತಾಲ್ಲೂಕುಗಳು ಬಿಟ್ಟು ಹೋಗಿದ್ದರೆ ಪರಿಶೀಲಿಸಿ ಸೇರಿಸಲಾಗುವುದು ಎಂದು ತಿಳಿಸಿದರು.
ರೈತರ ಪ್ರತಿಭಟನೆ: ಜಿಲ್ಲೆಯನ್ನು ಸಂಪೂರ್ಣವಾಗಿ ಬರಪೀಡಿತ ಎಂಬುದಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಒಣಗಿದ ರಾಗಿ ಹಾಗೂ ಮೆಕ್ಕೆಜೋಳದ ಬೆಳೆಯನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.