ದಾವಣಗೆರೆ, ಜೂ. 25 – ಭಾರತೀಯ ರೈಲ್ವೆಯಲ್ಲಿಯೇ ಮೊದಲ ಬಾರಿಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 27 ನೇಯ ಜೂನ್ 2023 ರಂದು ಧಾರವಾಡ-ಕೆಎಸ್ಆರ್ ಬೆಂಗಳೂರು ನಗರಗಳ ನಡುವಿನ ಕರ್ನಾಟಕ ರಾಜ್ಯದ ಎರಡನೇ ವಂದೇ ಭಾರತ್ ರೈಲು ಸೇರಿದಂತೆ ಒಂದೇ ದಿನದಲ್ಲಿ ಐದು ವಂದೇ ಭಾರತ್ ಎಕ್ಸ್ಪ್ರೆಸ್ ಸೆಮಿ-ಹೈ ಸ್ಪೀಡ್ ರೈಲುಗಳನ್ನು ಆನ್ ಲೈನ್ ಮುಖಾಂತರ ಉದ್ಘಾಟಿಸಲಿದ್ದಾರೆ. ದಕ್ಷಿಣ ಭಾರತದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಆದ ಮೈಸೂರು-ಚೆನ್ನೈ ಮಾರ್ಗದಲ್ಲಿನ ಸೆಮಿ-ಹೈ-ಸ್ಪೀಡ್ ರೈಲಿನೊಂದಿಗೆ ಕರ್ನಾಟಕವು ತನ್ನ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಪಡೆದಿತ್ತು. ಧಾರವಾಡ-ಕೆಎಸ್ಆರ್ ಬೆಂಗಳೂರು ನಗರಗಳ ನಡುವಿನ ಗಾಡಿಯು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ಓಡಾಡುವ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಆಗಲಿದೆ.
ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಯಶವಂತಪುರ, ದಾವಣಗೆರೆ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ.
ಉದ್ಘಾಟನಾ ವಿಶೇಷ ರೈಲು ಗಾಡಿಯು 27.06.2023 ರಂದು ಬೆಳಗ್ಗೆ ಸುಮಾರು 10:35 ಗಂಟೆಗೆ ಧಾರವಾಡ ರೈಲು ನಿಲ್ದಾಣ ದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಹುಬ್ಬಳ್ಳಿ, ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ಅಮ್ಮಸಂದ್ರ, ತುಮಕೂರು, ದೊಡ್ಡಬೆಲೆ, ಚಿಕ್ಕಬಾಣಾವರ ಮತ್ತು ಯಶವಂತಪುರ ಜಂಕ್ಷನ್ ಮಾರ್ಗವಾಗಿ ಜೊತೆಯಲ್ಲಿ ಲಗತ್ತಿಸಲಾದ ವೇಳಾಪಟ್ಟಿಯ ಪ್ರಕಾರ ಚಲಿಸಿ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ.
ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಧಾರವಾಡ ನಗರಗಳನ್ನು ತ್ವರಿತವಾಗಿ ಸೇರಿಸಿ ಸಂಪರ್ಕವನ್ನು ಒದಗಿಸುವ ಈ ರೈಲಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಹೊಸದಾಗಿ ಪರಿಚಯಿಸಲಾದ ರೈಲಿಗೆ ಪತ್ರಿಕಾ ಪ್ರಚಾರಕ್ಕಾಗಿ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ವಂದೇ ಭಾರತ್ ರೈಲಿನ ವೇಳಾಪಟ್ಟಿ ಆಗಮನದ 30 ನಿಮಿಷಗಳ ಮೊದಲು ಹಾಜರಾಗಲು ಮೈಸೂರು ವಿಭಾಗದ ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಲೋಹಿತೇಶ್ವರ ತಿಳಿಸಿದ್ದಾರೆ.