ಹರಿಹರದ ಕಾರ್ಯಕ್ರಮದಲ್ಲಿ ಮೌಲಾನಾ ಸೈಯದ್ ಶಂಶುದ್ದೀನ್ ಬರ್ಕಾತಿ
ಹರಿಹರ, ಜು. 20 – ವಿದ್ಯಾರ್ಥಿಗಳು ಕಲಿಯುವಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿಸದಷ್ಟೂ ಭವಿಷ್ಯ ಉಜ್ವಲವಾಗುತ್ತದೆ ಎಂದು ಮೌಲಾನಾ ಸೈಯದ್ ಶಂಶುದ್ದೀನ್ ಬರ್ಕಾತಿ ಹೇಳಿದರು.
ನಗರದ ಅಂಜುಮನ್ ಎ ಇಸ್ಲಾಮಿಯ ಪದವಿ ಪೂರ್ವ ಸೈನ್ಸ್ ಕಾಲೇಜಿನ ಹೊಸ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಏಕಾಗ್ರತೆ, ಶಿಸ್ತು, ಸಂಯಮದ ಜೊತೆ ಗುರಿ ಹೊಂದಿದಾಗ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ಹೇಳಿದ ಅವರು, ಸುಮಾರು 39 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿಕೊಟ್ಟಿರುವ ಕಿನ್ ಲಾಂಗ್ ಹಾರ್ಡ್‌ವೇರ್ ಇಂಡಿಯಾ ಸಂಸ್ಥೆಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಕಿನ್ ಲಾಂಗ್ ಹಾರ್ಡ್‌ವೇರ್ ಇಂಡಿಯಾ ಕಂಪನಿಯ ಉಪಾಧ್ಯಕ್ಷ ಸೈಯದ್ ಅಝರ್ ಮಾತನಾಡಿ, ತಮ್ಮ ಕಂಪನಿಯು ವಿದ್ಯಾದಾನಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ದೇಶದ ನಾಲ್ಕು ಶಾಲೆಗಳಿಗೆ ಅಗತ್ಯ ನೆರವು ನೀಡಿದೆ ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆಯ ಸತೀಶ್ ಜಾರಕಿ ಹೊಳಿ ಫೌಂಡೇಷನ್ ರಾಜ್ಯ ನಿರ್ದೇಶಕ ಎ.ಬಿ. ರಾಮ ಚಂದ್ರಪ್ಪ ಇವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ 35 ಡೆಸ್ಕ್‌ಗಳನ್ನು ಅಂಜುಮನ್ ಎ ಇಸ್ಲಾಮಿಯ ಪದವಿ ಪೂರ್ವ ಕಾಲೇಜಿಗೆ ನೀಡಿರುವುದಾಗಿ ತಿಳಿಸಿದರು.
ಜಿಲ್ಲಾ ವಕ್ಫ್ ಮಂಡಳಿಯ ಛೇರ್ಮನ್ ಮೊಹಮ್ಮದ್ ಸಿರಾಜ್ ಮಾತನಾಡಿದರು.
ಈ ಸಂದರ್ಭದಲ್ಲಿ ಅಂಜುಮಾನ್ ಶಾಲೆ ಆಡಳಿತ ಅಧಿಕಾರಿ ಸೈಯದ್ ಮೌಜಂ, ಅಂಜುಮನ್ ಎ ಇಸ್ಲಾಮಿಯ ಕಮಿಟಿ ಸದಸ್ಯರಾದ ಸೈಯದ್ ಆಸಿಫ್ ಜುನೇದಿ, ಸೈಯದ್ ಮುನೀರ್, ಸೈಯದ್ ಇಮ್ತಿಯಾಜ್ ಕರೆಕಟ್ಟೆ, ಬಿ ಮೊಹಮ್ಮದ್ ಫೈರೋಜ್, ಅಬ್ದುಲ್ ಜಬ್ಬಾರ್, ಮುಸ್ಲಿಂ ಸಮುದಾಯದ ಮುಖಂಡರಾದ ಮುಜಮಿಲ್ ಬಿಲ್ಲೂ, ಮನಸೂರ ಮದ್ದಿ, ಸನಾವುಲ್ಲಾ, ವಾಸೀಂ ಸಾಬ್, ಏಜಾಜ್ ಆಹ್ಮದ್, ಕಿನ್ ಲಾಂಗ್ ಕಂಪನಿಯ ಆಡಳಿತ ಮಂಡಳಿಯ ವ್ಯವಸ್ಥಾಪಕ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.