ಕುರ್ಕಿ : ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಸಿ.ಜಿ.ಜಗದೀಶ್ ಕೂಲಂಬಿ
ದಾವಣಗೆರೆ, ಜೂ.6- ನಮ್ಮ ಸುತ್ತ ಮುತ್ತಲ ಪರಿಸರವನ್ನು ಹಸಿರಾಗಿಡುವುದು ನಮ್ಮ ಕೈಯ್ಯಲ್ಲಿಯೇ ಇದೆ. ಅದು ನಮ್ಮೆಲ್ಲರ ಹೊಣೆ. ಹೊತ್ತು ಹೆತ್ತ ತಾಯಿ, ಪೋಷಿಸಿದ ತಂದೆ ಮತ್ತು ನಮಗೆ ಎಲ್ಲವನ್ನು ನೀಡುವ ಭೂ ಮಾತೆಯ ಋಣ ತೀರಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ನಮ್ಮ ಪರಿಸರವನ್ನು ಹಸಿರು ಸಸ್ಯಗಳಿಂದ ಕಂಗೊಳಿಸುವಂತೆ ಮಾಡಬಹುದು. ಇದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ನಾವೆಲ್ಲರೂ ಈ ರೀತಿಯಲ್ಲಾದರೂ ಪರಿಸರಕ್ಕೆ ಕೊಡುಗೆ ನೀಡೋಣ ಎಂದು ಅಧ್ಯಾಪಕ ಸಿ.ಜಿ. ಜಗದೀಶ್ ಕೂಲಂಬಿ ಮಕ್ಕಳಿಗೆ ಕರೆ ನೀಡಿದರು.
ಕುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಪರಿಸರ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಇಂದು ನಾವು-ನೀವೆಲ್ಲರೂ ಆದಷ್ಟು ಪರಿಸರ ಸ್ನೇಹಿ ದಿನೋಪಯೋಗಿ ವಸ್ತುಗಳನ್ನು ಬಳಸಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ದಿನನಿತ್ಯ ಸಣ್ಣದೊಂದು ಪ್ರಯತ್ನ ಮಾಡೋಣ ಎಂದರು.
ಊರಿನ ಗಣ್ಯರಾದ ಕೆ.ಜಿ.ವೇದಮೂರ್ತಿ ಗೌಡ್ರು ವಿಶ್ವ ಪರಿಸರ ದಿನವನ್ನು ಉದ್ದೇಶಿಸಿ ಮಾತನಾಡಿ, `ಉಸಿರಿಗಾಗಿ ಹಸಿರು’ ಕಾಡು ಬೆಳೆಸಿ, ನಾಡು ಉಳಿಸುವ ಸಂಕಲ್ಪ ಮಾಡೋಣ. ಈ ಭೂಮಿ ಅಂತರದಲ್ಲಿದೆ. ಪರಿಸರದ ಮೇಲೆ ನಾವು ಅವಲಂಬಿಸಿ ದ್ದೇವೆ. ಸ್ವಲ್ಪ ಏರುಪೇರಾದರೂ ಅಪಾಯ ನಿಶ್ಚಿತ. ಸುಂದರ ಪರಿಸರದೊಂದಿಗೆ ಬಾಳೋಣ. ಪರಿಸರ ಉಳಿಸಿ ಬೆಳೆಸೋಣ ಎನ್ನುವ ಪರಿಸರ ಕಾಳಜಿ ಪ್ರಜ್ಞೆಯ ಮಾತುಗಳನ್ನು ಮಕ್ಕಳಿಗೆ ತಿಳಿಸಿದರು.
ಕುರ್ಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳೊಂದಿಗೆ ಪರಿಸರ ಜಾಗೃತಿ ಜಾಥಾ ನಡೆಯಿತು. ವಿಜ್ಞಾನ ಶಿಕ್ಷಕ ಹೆಚ್. ವಿರೂಪಾಕ್ಷಿ ಉಸ್ತುವಾರಿ ವಹಿಸಿಕೊಂಡಿದ್ದರು. ಶಾಲೆಯ ದೈಹಿಕ ಶಿಕ್ಷಕರಾದ ಎ.ಆರ್. ರಾಘವೇಂದ್ರ, ಎಸ್. ಪ್ರಕಾಶ್, ಎಂ.ಎನ್. ನಾಗರಾಜ, ಶಿಕ್ಷಕಿಯರಾದ ಎಸ್. ಪಾರ್ವತಮ್ಮ, ಎಂ.ವಿ. ಶಕುಂತಲಾ, ಎಸ್. ಶಾಂತಕುಮಾರಿ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಕೆ.ವಿ. ಓಂಕಾರಪ್ಪ ಉಪಸ್ಥಿತರಿದ್ದರು.