ಜಗಳೂರು ಕ್ಷೇತ್ರದ ರೈತರ ಬದುಕು ಹಸನಾಗಿಸಲು ಸದಾ ಸಿದ್ಧ

ಜಗಳೂರು ಕ್ಷೇತ್ರದ ರೈತರ ಬದುಕು ಹಸನಾಗಿಸಲು ಸದಾ ಸಿದ್ಧ

ಶಾಸಕ ಬಿ.ದೇವೇಂದ್ರಪ್ಪ ಭರವಸೆ

ಜಗಳೂರು, ಜೂ.5- ದೇಶದ ಬೆನ್ನೆಲುಬು ರೈತ. ಕ್ಷೇತ್ರದಲ್ಲಿ ರೈತರ ಬದುಕು ಹಸನಾಗಿಸಲು ಸದಾ ಸಿದ್ಧನಾಗಿರುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅವರು ಭರವಸೆ ನೀಡಿದರು. 

ತಾಲ್ಲೂಕಿನ ಬಿದರಕೆರೆ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ನೂತನ ಕಛೇರಿ ಮತ್ತು ಗೋದಾಮು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ರೈತರಿಗೆ  ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾದ ಪರಿಕರಗಳನ್ನು ಪೂರೈಕೆ ಮಾಡುವ ಮೂಲಕ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ರೈತ ಉತ್ಪಾದಕ ಕಂಪನಿಯ ಕಾರ್ಯವೈಖರಿ ಶ್ಲ್ಯಾಘನೀಯ ಎಂದರು. 

ಮಾಜಿ ಶಾಸಕ ಗುರುಸಿದ್ದನಗೌಡ ಮಾತನಾಡಿ, ಸರ್ಕಾರಿ ನೌಕರರಿಗೆ, ಡಾಕ್ಟರ್, ಇಂಜಿನಿಯರ್‌ಗಳಿಗೆ ಸಿಗುವ ಸಾಮಾಜಿಕ ಗೌರವ ಕೃಷಿ ಉತ್ಪಾದಕ ರೈತನಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆಯಿಲ್ಲದೆ ಆದಾಯದಿಂದ ವಿಮುಖಗೊಂಡು ಬೀದಿಗೆ ಬಿದ್ದಿದ್ದಾನೆ.

ಮಳೆಯಾಶ್ರಿತವಾಗಿರುವ ಖುಷ್ಕಿ ಜಮೀನಿನಲ್ಲಿ ಮಿಶ್ರ ಬೆಳೆಗೆ ಮುಂದಾಗಬೇಕು. ಕ್ಷೇತ್ರದಲ್ಲಿ ಸರ್ಕಾರದ ರೈತ ಪರವಾದ ಚಟುವಟಿಕೆಗಳು ಚುರುಕುಗೊಳ್ಳಲಿ. ಶಾಸಕರು ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿ ಎಂದು ನೂತನ ಶಾಸಕ ದೇವೇಂದ್ರಪ್ಪ ಅವರಿಗೆ ಸಲಹೆ ನೀಡಿದರು. 

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಕೃಷಿ ಒಂದು ಉದ್ಯಮವಾಗಬೇಕಿದೆ. ರೈತರು ವಿಜ್ಞಾನ ಕೇಂದ್ರಗಳಿಂದ ತರಬೇತಿ ಪಡೆಯಬೇಕು.ಎತ್ತುಗಳ ಸಂಖ್ಯೆ ಕ್ರಮೇಣ ಕ್ಷೀಣಗೊಳ್ಳುತ್ತಿದೆ.ಹೈನುಗಾರಿಕೆ ರೂಪಿಸಿಕೊಂಡರೆ, ಸಾವಯವ ಕೃಷಿಗೆ ಪೂರಕವಾಗುತ್ತದೆ. ನಮ್ಮ ತಾಲ್ಲೂಕು ಫಲವತ್ತತೆಯ ಭೂಮಿ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಕೆರೆಗಳು ಭರ್ತಿಯಾಗಿ, ನೀರಾವರಿ ಪ್ರದೇಶವಾಗಲಿದೆ ಎಂದು ಹೇಳಿದರು.

ರಾಗಿ ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳಿಂದ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ. ಅರ್ಹ ರೈತರಿಗೆ ಸೌಲಭ್ಯ ಸಿಗುತ್ತಿಲ್ಲ. ಶಾಸಕರು ಗಮನ ಹರಿಸಬೇಕು ಎಂದರು. 

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ಸನಾತನ ಕೃಷಿ ಪದ್ಧತಿ ಸುಸ್ಥಿರವಾಗಿತ್ತು. ಮೆಕ್ಕೆಜೋಳದ ಬೆಳೆಯಲ್ಲಿ ಅಂತರ ಬೆಳೆಯಾಗಿ ದ್ವಿದಳ ಧಾನ್ಯ ತೊಗರಿ, ಅಂಚಿನಲ್ಲಿ ಔಡಲ ಬೆಳೆ ಬಿತ್ತನೆ ಮಾಡಬೇಕು. ಈ ಕುರಿತು ಕಳೆದ ಮೂರು ವರ್ಷಗಳಿಂದ ಇಲಾಖೆಯಿಂದ ಜಾಗೃತಿ ಆಂದೋಲನ ನಡೆಸಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ಗ್ರಾ.ಪಂ ಅಧ್ಯಕ್ಷೆ ಪವಿತ್ರಾ ವೀರೇಶ್, ಅಮೃತ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸೋಮನಗೌಡ, ಕವಿತಾ, ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್, ಬಿಸ್ತುವಳ್ಳಿ ನಾಗರಾಜ್, ಕೃಷ್ಣಮೂರ್ತಿ, ಬಸವನಗೌಡ, ಗೌಸ್ ಪೀರ್ ಸೇರಿದಂತೆ, ಇತರರು ಇದ್ದರು.

error: Content is protected !!