ದಾವಣಗೆರೆ, ಜೂ. 4- ಶಿಕ್ಷಣದಿಂದ ಏನೆಲ್ಲಾ ಸಾಧನೆ ಮಾಡಲು ಸಾಧ್ಯವಿದೆ. ವಿದ್ಯೆ ಸಾಧಕನ ಸೊತ್ತೇ ಹೊರತು, ಸೋಮಾರಿಯ ದ್ದಲ್ಲ ಎಂದು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮ ದಲ್ಲಿ ಶ್ರೀ ಮಾತೃದೇವೋ ಸಮಾಜ ಕಲ್ಯಾಣ ಹಾಗೂ ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ನ ಮೂರನೇ ವಾರ್ಷಿಕೋತ್ಸವ ಹಾಗೂ ಟ್ರಸ್ಟ್ ಸಂಸ್ಥಾಪಕ ಪೋತಲ್ ಶ್ರೀನಿವಾಸ್ ಅವರ ಜನ್ಮ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮೊದಲು ಗುರು-ಹಿರಿಯರು, ತಂದೆ-ತಾಯಂದಿರಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕು.
ವಿದ್ಯೆ ಕಲಿಯುವ ಜೊತೆಗೆ ವಿನಯವಂತರಾಗಬೇಕು ಎಂದು ಹಿತ ನುಡಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೇ ಪಠ್ಯದ ಜೊತೆಗೆ ಜೀವನ ಶಿಕ್ಷಣದ ಪಾಠವನ್ನು ಕಲಿಯಬೇಕು.
ಪೋಷಕರು ತಮ್ಮ ಮಕ್ಕಳಿಗೆ ಡಾಕ್ಟರ್ ಅಥವಾ ಇಂಜಿನಿಯರ್ ಆಗಲಿ ಎಂದು ಒತ್ತಡ ಹೇರಬಾರದು. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗದ ಆಯ್ಕೆಯನ್ನು ಬಿಡಬೇಕು. ತನ್ಮೂಲಕ ಆಸಕ್ತಿ ಕ್ಷೇತ್ರದಲ್ಲಿ ತಾವು ಉನ್ನತ ವ್ಯಾಸಂಗ ಮಾಡಿ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗುವಂತೆ ಕರೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ದೇವರ ಮನಿ ಶಿವಕುಮಾರ್, ಯುವ ಮುಖಂಡ ಜಿ.ವಿ. ಗಂಗಾಧರ್ ಮಾತನಾಡಿದರು.
ಟ್ರಸ್ಟ್ ಸಂಸ್ಥಾಪಕ ಪೋತಲ್ ಶ್ರೀನಿವಾಸ್, ಕಾರ್ಯದರ್ಶಿ ಜಿ.ಎಸ್. ಪರಶುರಾಮ್, ಡಾ. ಪುಷ್ಪ, ಸುಹಾಸಿನಿ ಭಟ್ ಮತ್ತಿತರರು ಉಪಸ್ಥಿತರಿದ್ದರು.