ಹರಪನಹಳ್ಳಿ ಕಸಾಪ ದತ್ತಿ ಕಾರ್ಯಕ್ರಮದಲ್ಲಿ ಹಿ.ವ.ಕ.ಇ.ವಿಸ್ತರಣಾಧಿಕಾರಿ ಕೆ. ಭೀಮಪ್ಪ
ಹರಪನಹಳ್ಳಿ,ಜೂ. 4- ಆರೋಗ್ಯ ಕರ ಸಮಾಜ ನಿರ್ಮಾಣ ಮಾಡುವಲ್ಲಿ ಜಾನಪದ ಹಾಗೂ ವಚನ ಸಾಹಿತ್ಯದ ಪಾತ್ರ ಬಹುಮುಖ್ಯವಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಕೆ. ಭೀಮಪ್ಪ ಹೇಳಿದರು.
ಇಲ್ಲಿನ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಚಿಗಟೇರಿ ಅಂಬಮ್ಮ ಮತ್ತು ಹನುಮಂತಪ್ಪ ದತ್ತಿ, ಶ್ರೀ ಹಾಲಾನಾಯ್ಕ ಲಷ್ಕರಿನಾಯ್ಕ ದತ್ತಿ, ಬಾಗಳಿ ಶ್ರೀಮತಿ ಕೆಂಚಮ್ಮ ಮಾಗಳದ ಮಲ್ಲಿಕಾರ್ಜುನಪ್ಪ ದತ್ತಿ, ಬಾಗಳಿ ರಾಮನಗೌಡ ಹಾಲಮ್ಮ ಚನ್ನನಗೌಡ ದತ್ತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು-ನುಡಿ, ನೆಲ-ಜಲದ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ನಿರಂತರವಾಗಿದೆ. ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರ ತೊಲಗಿಸಲು ಅನೇಕ ಸಾಹಿತಿಗಳು ಶ್ರಮಿಸುತ್ತಾ ಬಂದಿದ್ದಾರೆ. ಕನ್ನಡ ಎಂದರೆ ಶಕ್ತಿ ಕನ್ನಡ ಎಂದರೆ ನಿತ್ಯದ ಬದುಕು, ಕನ್ನಡ ಸುಲಿದ ಬಾಳೆಹಣ್ಣು ಇದ್ದಹಾಗೆ. ಕನ್ನಡ ಪ್ರತಿಯೊಬ್ಬರಲ್ಲಿ ಹೃದಯದ ಭಾಷೆಯಾಗಬೇಕು ಎಂದರು.
ಜಾನಪದ ಹಾಗು ವಚನ ಸಾಹಿತ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಕಣವಿಹಳ್ಳಿ ಮಂಜುನಾಥ, ಜಾನಪದದಲ್ಲಿ ಸಿಂಹ ಪಾಲು ಮಹಿಳೆಯ ರದ್ದೇ ಆಗಿದ್ದು, ಹರಪನಹಳ್ಳಿ ತಾಲ್ಲೂಕಿನ ಭೀಮವ್ವ, ಎಲಿಸವ್ವ ಸೇರಿದಂತೆ ಅನೇಕ ಮಹಿಳಾ ಜನಪದ ಕಲಾವಿದರು ಇದ್ದಾರೆ. ಜನಪದದಲ್ಲಿ ನೈತಿಕ ಮೌಲ್ಯಗಳಿವೆ. ಬೀಸುವಾಗ, ಕುಟ್ಟುವಾಗ, ಬೆಳೆ ಕೊಯ್ಲು ಮಾಡುವಾಗ, ಜನಪದ ಸಾಹಿತ್ಯ ಬಾಯಿಂದ ಬಾಯಿಗೆ ಸಾಗುತ್ತಾ ಬಂದರೂ ಕೂಡ, ಸಾಕಷ್ಟು ಬರಹದಲ್ಲಿ ಸಿಗದೇ ಇರುವುದು ದುರಂ ತದ ಸಂಗತಿಯಾಗಿದೆ. ಸರ್ಕಾರ ಜನಪದ ಕಲಾವಿದರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದರೆ ಜನಪದ ಉಳಿಯುತ್ತದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶತಮಾನ ಕಂಡ ಕನ್ನಡ ಸಾಹಿತ್ಯ ಪರಿಷತ್ ಇಂದು ಹೆಮ್ಮರ ವಾಗಿ ಬೆಳೆದಿದ್ದು, ಕನ್ನಡವನ್ನು ಉಳಿಸುವ ಬೆಳೆಸುವ ಕೆಲಸವನ್ನು ಮಾಡುವತ್ತ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ನಿಲಯಪಾಲಕ ಬಿ.ಎಚ್. ಚಂದ್ರಪ್ಪ ಮಾತನಾಡಿ, ದತ್ತಿ ಕಾರ್ಯಕ್ರಮಗಳ ಮೂಲಕ ಜನಪದ ಕಲೆ, ಸಾಹಿತ್ಯ ಉಳಿಸಿ, ಬೆಳೆಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಉತ್ತಮವಾಗಿ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಆರ್. ಪದ್ಮರಾಜ ಜೈನ್, ಗೌರವ ಕೋಶಾಧಿಕಾರಿ ಕೆ.ರಾಘವೇಂದ್ರ ಶೆಟ್ಟಿ, ನಿರ್ದೇಶಕರಾದ ಎಸ್.ಮಕಬುಲ್ ಭಾಷಾ ಸೇರಿದಂತೆ ಇತರರು ಇದ್ದರು.