ಜಗಳೂರು: ಶಾಲಾ ಹಾಜರಿ ಪುಸ್ತಕಕ್ಕೆ ಸಹಿ ಹಾಕಿ, ಘಂಟೆ ಭಾರಿಸಿ, ಕಸ ಗುಡಿಸಿದ ಶಾಸಕ ದೇವೇಂದ್ರಪ್ಪ
ಜಗಳೂರು, ಜೂ.1- ಯಾರೊಬ್ಬರಿಗೂ ತಾರತಮ್ಯವಿಲ್ಲದೆ ಸಮಸ್ತ ಮತದಾರರಿಗೆ ನ್ಯಾಯ ಒದಗಿಸುತ್ತಾ ಕ್ಷೇತ್ರದಲ್ಲಿ ಕಸಗುಡಿಸಿ ಅಭಿವೃದ್ದಿ ಘಂಟೆ ಭಾರಿಸುವೆ. ಕ್ಷೇತ್ರವನ್ನು ರಾಮರಾಜ್ಯವನ್ನಾಗಿಸುವ ಪರಿಕಲ್ಪನೆ ನನ್ನದು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಶಾಸಕರು, ತಾವು ಜವಾನನಾಗಿ ಸೇವೆ ಮಾಡಿ ನಿವೃತ್ತಿ ಹೊಂದಿದ ಪಟ್ಟಣದ ಅಮರಭಾರತಿ ವಿದ್ಯಾಕೇಂದ್ರದ ಆವರಣದಲ್ಲಿ ಗುರುವಾರ `ಸಾಂಕೇತಿಕವಾಗಿ’ ಶಾಲಾ ಘಂಟೆ ಬಾರಿಸಿ, ಕಸಗುಡಿಸಿ ನಂತರ ಅವರು ಮಾತನಾಡಿದರು.
ವಿದ್ಯಾರತ್ನ ದಿ.ಟಿ.ತಿಪ್ಪೇಸ್ವಾಮಿ ಅವರು ಬಡತನದಲ್ಲಿ ಜನಿಸಿದ ನನಗೆ `ಡಿ’ ಗ್ರೂಪ್ ನೌಕರಿ ಒದಗಿಸಿದರು. ಅಂದು 380 ರೂ ವೇತನದೊಂದಿಗೆ ವೈಯಕ್ತಿಕ ಜೀವನ ನೀಡಿದರು. ಅಲ್ಲದೆ ನನ್ನ ಮಕ್ಕಳಿಗೆ ಅಮರಭಾರತಿ ವಿದ್ಯಾಕೇಂದ್ರದಲ್ಲಿ ಉಚಿತ ಶಿಕ್ಷಣದ ಭಿಕ್ಷೆಯಿಂದ ನನ್ನ ಮಗ ಐಎಎಸ್ ಉತ್ತೀರ್ಣನಾದ ಫಲವಾಗಿ ನಾನು ಶಾಸಕನಾಗಿದ್ದೇನೆ ಎಂದು ಹೇಳಿದರು.
ವಿದ್ಯಾರತ್ನ ದಿವಂಗತ ಟಿ.ತಿಪ್ಪೇಸ್ವಾಮಿ ಅವರು ನನಗೆ ಜೀವನ ನೀಡಿದ್ದನ್ನು ಮರೆತರೆ ನಿಜಕ್ಕೂ ಆತ್ಮವಂಚನೆ ಮಾಡಿಕೊಂಡಂತೆ. ಅವರು ದೈವಸ್ವರೂಪ ಎಂದು ದೇವೇಂದ್ರಪ್ಪ ಸ್ಮರಿಸಿ ಭಾವುಕರಾದರು.
ಅಭಿವೃದ್ದಿಯೇ ನನ್ನ ಮಂತ್ರ: ಅಪಘಾತದಲ್ಲಿ ಮರುಜೀವ ಪಡೆದು, ದೈವ ಕೃಪೆಯಿಂದ ಶಾಸಕನಾಗಿದ್ದೇನೆ. ಕ್ಷೇತ್ರದ ಸಮಗ್ರವಾದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕರು ಹೇಳಿದರು.
ನನ್ನ ವಿರುದ್ದದ ಷಡ್ಯಂತರ ಮಣ್ಣುಪಾಲು: ನನ್ನನ್ನು ಚುನಾವಣೆಯಲ್ಲಿ ರೌಡಿಯನ್ನಾಗಿ ಬಿಂಬಿಸಿ ಸೋಲಿಸಲು ಷಡ್ಯಂತರ ನಡೆಸಿದರು. ಸತ್ಯದ ಮುಂದೆ ಸೋತು ಮಣ್ಣುಮುಕ್ಕಿದರು. ನನ್ನ ಆಡಳಿತಾವಧಿಯಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಸಕಾಲದಲ್ಲಿ ಕೈಗೊಂಡು, ಸಿರಿಗೆರೆ ಸ್ವಾಮೀಜಿಗಳ ಮಾರ್ಗದಲ್ಲಿ ಸಮಯಕ್ಕೆ ಮಹತ್ವ ನೀಡುವೆ ಎಂದು ತಿಳಿಸಿದರು.
ಅಮರಭಾರತಿ ವಿದ್ಯಾಕೇಂದ್ರದ ಕಾರ್ಯದರ್ಶಿ ಟಿ.ಮಧು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕೆಳದರ್ಜೆ ನೌಕರನಾಗಿ ನಿವೃತ್ತಿ ಹೊಂದಿದ ಒಬ್ಬ ಸಾಮಾನ್ಯ ವ್ಯಕ್ತಿ ಮಗನನ್ನು ಉನ್ನತ ಅಧಿಕಾರಿಯಾಗಿಸಿರುವುದಲ್ಲದೆ ತಾವೊಬ್ಬ ಶಾಸಕನಾಗಿ ಆಯ್ಕೆಯಾಗಿ ನಮ್ಮ ಸಂಸ್ಥೆ ಅಂಗಳಕ್ಕೆ ಆಗಮಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್, ಕೆಚ್ಚೇನಹಳ್ಳಿ ಶಿವಣ್ಣ, ಸಿ.ತಿಪ್ಪೇಸ್ವಾಮಿ, ಎನ್.ಟಿ. ಎರ್ರಿಸ್ವಾಮಿ, ಸುಭಾಷ್ ಚಂದ್ರ ಬೋಸ್, ಕೆ.ಪಿ.ಪಾಲಯ್ಯ, ಸಿ. ಲಕ್ಷ್ಮಣ್, ಕೃಷ್ಣಪ್ಪ, ಮಹೇಶ್, ಪ್ರಭಾಕರ್ ಲಕ್ಕೋಳ್, ಶ್ವೇತಾ ಮಧು, ಲುಕ್ಮಾನ್ ಖಾನ್, ಶಕೀಲ್ ಅಹಮ್ಮದ್, ಷಂಷುದ್ದೀನ್, ಪಲ್ಲಾಗಟ್ಟೆ ಶೇಖರಪ್ಪ, ಅಹಮ್ಮದ್ ಅಲಿ ಇದ್ದರು.