ದಾವಣಗೆರೆ, ಮೇ 26- ವ್ಯಂಗ್ಯಚಿತ್ರಗಳ ಉದ್ದೇಶ ಕೇವಲ ನಗಿಸುವುದಷ್ಟೇ ಅಲ್ಲ, ಆರೋಗ್ಯವಂತ ಸಮಾಜಕ್ಕಾಗಿ ಉಪಚಾರ ನೀಡುವುದೇ ವ್ಯಂಗ್ಯಚಿತ್ರಗಳ ಉದ್ದೇಶ ಎಂದು ಹಿರಿಯ ಪತ್ರಕರ್ತ, ವ್ಯಂಗ್ಯ ಚಿತ್ರಕಾರ ಹೆಚ್.ಬಿ.ಮಂಜುನಾಥ್ ಹೇಳಿದರು.
ನಗರದ ನೇತಾಜಿ ಸ್ಕೌಟ್ ಗ್ರೂಪ್ ಮತ್ತು ಚೇತನ ಗೈಡ್ ಗ್ರೂಪ್ ವತಿಯಿಂದ ಏರ್ಪಾಡಾಗಿದ್ದ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಾತ್ಯಕ್ಷಿಕೆ ನೀಡಿದ ಅವರು, ಸಾಮಾಜಿಕ ವ್ಯವಸ್ಥೆಯಲ್ಲಿನ ವೈಪರೀತ್ಯಗಳನ್ನು ಡೊಂಕು ಗೆರೆಗಳಲ್ಲಿ ಚಿತ್ರಿಸಿ ಅದಕ್ಕಿಷ್ಟು ಹಾಸ್ಯ ಲೇಪವನ್ನು ಕೊಟ್ಟು ನಗಿಸುತ್ತಾ ಚುರುಕು ಮುಟ್ಟಿಸುವ ವಿಶೇಷತೆ ವ್ಯಂಗ್ಯ ಚಿತ್ರಗಳಿಗಿವೆ ಎಂದರು.
ಎದ್ದು ಕಾಣುವ ಗುಣಲಕ್ಷಣಗಳ ಉತ್ಪ್ರೇಕ್ಷೆಯ ವ್ಯಂಗ್ಯ ಚಿತ್ರಗಳನ್ನು ಬರೆಯುವವರಿಗೆ ನೈಜ ಚಿತ್ರಕಲೆಯ ವ್ಯವಸಾಯವು ಮೂಲವಾಗಿ ಇರಲೇಬೇಕು ಎಂದ ಮಂಜುನಾಥ್, ಗುಣದೋಷಗಳನ್ನು ಟೀಕಿಸಿ ಬಿಂಬಿಸುವ ವ್ಯಂಗ್ಯಚಿತ್ರಗಳು ಮೊನಚಾಗಿ ಕಹಿ ಗುಳಿಗೆಗೆ ಸಿಹಿ ಲೇಪದಂತೆ ನಗುವನ್ನು ಚಿಮ್ಮಿಸುತ್ತವೆ. ಆರೋಗ್ಯವಂತ ಸಮಾಜಕ್ಕಾಗಿ ಉಪಚಾರ ನೀಡುವ ಚುಚ್ಚುಮದ್ದುಗಳಂತೆ ವ್ಯಂಗ್ಯ ಚಿತ್ರಗಳು ಜನಪ್ರಿಯವಾಗಿವೆ ಎಂದರಲ್ಲದೇ ಸರಳ ಮತ್ತು ಡೊಂಕು ರೇಖೆಗಳಲ್ಲಿ ವ್ಯಂಗ್ಯ ಚಿತ್ರಗಳ ರಚನೆ ಹೇಗೆ ಎಂಬುದನ್ನು ಮಂಜುನಾಥ್ ಚಿತ್ರಿಸಿ ತೋರಿಸಿದರು.
ಪಿ.ಜೆ.ಬಡಾವಣೆಯ ಬಾಪೂಜಿ ಶಾಲಾ ಆವರಣದಲ್ಲಿ ನೆರವೇರಿದ ಶಿಬಿರದಲ್ಲಿ ನೇತಾಜಿ ಸ್ಕೌಟ್ ಗ್ರೂಪಿನ ಜೆ.ಎಸ್.ವಿಜಯ್, ಚೇತನ ಗೈಡ್ ಗ್ರೂಪಿನ ಪಿ ಕಾವೇರಿ ಮುಂತಾದವರು ಉಪಸ್ಥಿತರಿದ್ದರು.