ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅಭಿಮತ
ನವದೆಹಲಿ, ಮೇ 22 – ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಪೈಕಿ 2,000 ರೂ. ನೋಟುಗಳ ಪ್ರಮಾಣ ಶೇ.10.8ರಷ್ಟು ಮಾತ್ರವಾಗಿದೆ. ಹೀಗಾಗಿ ಅವುಗಳನ್ನು ವಾಪಸ್ ಪಡೆಯುವುದರಿಂದ ಆರ್ಥಿಕತೆಯ ಮೇಲೆ ಆಗುವ ಪರಿಣಾಮ ತೀರಾ ಕಡಿಮೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.
ರಿಸರ್ವ್ ಬ್ಯಾಂಕ್‌ನ ನೋಟುಗಳ ನಿರ್ವಹಣೆ ಕಾರ್ಯಚರಣೆ ಅಂಗವಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸೆಪ್ಟೆಂಬರ್ 30ರವರೆಗೆ 2,000 ರೂ.ಗಳ ನೋಟುಗಳನ್ನು ವಾಪಸ್ ನೀಡಲು ಗಡುವು ನೀಡಲಾಗಿದೆ. ಅಷ್ಟರಲ್ಲಿ ಎಲ್ಲಾ ನೋಟುಗಳು ವಾಪಸ್ ಬರುವ ನಿರೀಕ್ಷೆ ಇದೆ ಎಂದವರು ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಲಾವಣೆಯಲ್ಲಿರುವ ನೋಟುಗಳಲ್ಲಿ 2,000 ರೂ.ಗಳ ನೋಟುಗಳ ಪ್ರಮಾಣ ಶೇ.10.8 ಮಾತ್ರ. ಹೀಗಾಗಿ ಆರ್ಥಿಕತೆಯ ಮೇಲೆ ಆಗುವ ಪರಿಣಾಮ ತೀರಾ ಕಡಿಮೆ ಎಂದು ಹೇಳಿದರು.
2,000 ರೂ.ಗಳ ನೋಟುಗಳನ್ನು ಚಲಾವಣೆಗೆ ಸಾಮಾನ್ಯವಾಗಿ ಬಳಸುವುದಿಲ್ಲ. ಇವುಗಳ ಚಲಾವಣೆಯೇ ಕಡಿಮೆ ಇದೆ. ಹೀಗಾಗಿ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮವಾಗು ವುದಿಲ್ಲ ಎಂದು ದಾಸ್ ತಿಳಿಸಿದರು.
ಶುದ್ಧ ನೋಟು ನೀತಿಯ ಅಂಗವಾಗಿ ರಿಸರ್ವ್ ಬ್ಯಾಂಕ್ ಕಾಲಾನುಕಾಲಕ್ಕೆ ಹಳೆಯ ನೋಟುಗಳನ್ನು ವಾಪಸ್ ಪಡೆಯುತ್ತದೆ. 2013-14ರಲ್ಲೂ ಸಹ ರಿಸರ್ವ್ ಬ್ಯಾಂಕ್ 2005ಕ್ಕೂ ಮುಂಚಿನ ನೋಟುಗಳನ್ನು ವಾಪಸ್ ಪಡೆದಿತ್ತು ಎಂದವರು ಹೇಳಿದರು. 2,000 ರೂ.ಗಳ ನೋಟುಗಳನ್ನು ಶುದ್ಧ ನೋಟು ನೀತಿಯ ಅನ್ವಯ ವಾಪಸ್ ಪಡೆಯಲಾಗುತ್ತಿದೆ. ಆದರೂ, ಅವುಗಳು ಕಾನೂನು ಮಾನ್ಯತೆ ಹೊಂದಿರುತ್ತವೆ. ಸೆಪ್ಟೆಂಬರ್ 30ರ ವೇಳೆಗೆ ಎಲ್ಲಾ ನೋಟುಗಳನ್ನು ಬ್ಯಾಂಕು ಗಳಿಗೆ ಜಮಾ ಮಾಡುವ ನಿರೀಕ್ಷೆ ಇದೆ. ಆನಂತರವೇ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ದಾಸ್ ತಿಳಿಸಿದರು.
ನೋಟುಗಳ ವಿನಿಮಯಕ್ಕೆ ಸಾಕಷ್ಟು ಸಮಯ ಇದೆ. ನೋಟುಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದಕ್ಕೆ ಸಂಬಂಧಿಸಿದಂತೆ ಜನರು ಆತಂಕ ಪಡಬಾರದು ಎಂದವರು ತಿಳಿಸಿದರು. ಬ್ಯಾಂಕುಗಳ ಬಳಿ ಸಾಕಷ್ಟು ಪ್ರಮಾಣದ ಮುದ್ರಿತ ನೋಟುಗಳಿವೆ. ಹೀಗಾಗಿ ನಗದು ಹರಿವಿನ ಮೇಲೆ ಪರಿಣಾಮವಾಗುವುದಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ದಾಸ್ ಹೇಳಿದರು.
ವಿದೇಶಗಳಲ್ಲಿರುವವರು ಹಾಗೂ ದೀರ್ಘಾ ವಧಿ ವಿದೇಶಿ ಭೇಟಿಯಲ್ಲಿರುವವರು ಮತ್ತು ವಿದೇಶದಲ್ಲಿ ಕೆಲಸ ಮಾಡುತ್ತಿರುವವರು ನೋಟು ಗಳನ್ನು ಬದಲಿಸಿಕೊಳ್ಳಲು ಸಮಸ್ಯೆ ಎದುರಿಸುವ ಬಗ್ಗೆ ನಮಗೆ ಸಂವೇದನೆ ಇದೆ. ಈ ವಿಷಯವನ್ನು ಸುಸೂತ್ರವಾಗಿ ಬಗೆಹರಿಸಲಾಗುವುದು ಎಂದು ಆರ್.ಬಿ.ಐ. ಗವರ್ನರ್ ಹೇಳಿದರು.
1,000 ರೂ. ನೋಟುಗಳನ್ನು ಮತ್ತೆ ಚಲಾ ವಣೆಗೆ ತರುವ ಸಾಧ್ಯತೆಯ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಊಹಾತ್ಮಕ ಪ್ರಶ್ನೆಯಾಗಿದೆ. ಸದ್ಯಕ್ಕೆ ಇಂತಹ ಪ್ರಸ್ತಾಪವಿಲ್ಲ ಎಂದರು.