ಹಿರೇಕಲ್ಮಠದಲ್ಲಿ 120 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾರ್ಯಗಳಿಗೆ ಭಕ್ತರು ಕೈಜೋಡಿಸಬೇಕು

ಹಿರೇಕಲ್ಮಠದಲ್ಲಿ 120 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾರ್ಯಗಳಿಗೆ ಭಕ್ತರು ಕೈಜೋಡಿಸಬೇಕು

ಹೊನ್ನಾಳಿ, ಮೇ 21 – ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿಯೇ ಇದ್ದು, ಪೋಷಕರು ಜಾಗ್ರತೆಯಿಂದ ಮಕ್ಕಳ ಲಾಲನೆ – ಪೋಷಣೆ ಮಾಡಬೇಕು ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿ ಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪೋಷಕರಿಗೆ ಕಿವಿ ಮಾತು ಹೇಳಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶ್ರೀ ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಮತ್ತು ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮಗು 6 ತಿಂಗಳಿದ್ದಾಗಿನಿಂದಲೇ ಪೋಷಕರು ಮಕ್ಕಳ ಕೈಯ್ಯಲ್ಲಿ ಮೊಬೈಲ್ ನೀಡುತ್ತಾ ಮಗುವನ್ನು ಮೊಬೈಲ್‍ಗೆ ದಾಸನಾಗುವಂತೆ ಮಾಡುತ್ತಾ ಮಗುವಿನ ಮೇಲೆ ದುಷ್ಪರಿಣಾಮವುಂಟಾಗಲು ಪೋಷಕರೇ ನೇರ ಕಾರಣರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತೀ ಅಮಾವಾಸ್ಯೆಯಂದು ಹಿರೇಕಲ್ಮಠದಲ್ಲಿ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು,  ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಕರೆ ತರಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಒದಗಿಸಿ ಕೊಡಲಾಗುತ್ತಿದ್ದು, ಎಲ್ಲರೂ ಇದರ ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ಹಾಗೆಯೇ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಇಲ್ಲಿಯೇ ಆಚರಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

 ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಪ್ರಯುಕ್ತ ಅವರ ಹೆಸರನ್ನು ಯೋಜನೆಗಳ ಮೂಲಕ ಶಾಶ್ವತವಾಗಿರಿಸುವ ನಿಟ್ಟಿನಲ್ಲಿ 2023 ರ ನವೆಂಬರ್ 14 ರಿಂದ ಡಿಸೆಂಬರ್ 14 ರವರೆಗೆ ಕೋಟಿ ದೀಪೋತ್ಸವ, ಕೋಟಿ ಬಿಲ್ವಾರ್ಚನೆ, ಕೋಟಿ ಕ್ಷೀರಾಭಿಷೇಕ, 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ನರ್ಸಿಂಗ್, ಫಾರ್ಮಸಿ, ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಲಾ-ಕಾಲೇಜುಗಳನ್ನು 120 ಕೋಟಿ ವೆಚ್ಚದಲ್ಲಿ ಪ್ರಾರಂಭ ಮಾಡಲಾಗುವುದು. ಎಲ್ಲಾ ರಾಜ್ಯಗಳಿಂದ 5 ಗೋವುಗಳನ್ನು ತಂದು ವಿದೇಶಿ ತಳಿಗಳ ಪರಿಚಯ ಮಾಡುವುದರ ಜೊತೆಗೆ ಗೋ-ಸಂವರ್ಧನಾ ಕೇಂದ್ರವನ್ನು ತೆರೆಯಲಾಗುವುದು. ಮಠದ ಭಕ್ತರು ಉದಾರ ಮನಸ್ಸಿನಿಂದ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಲಹೆ-ಸಹಕಾರ ನೀಡುವುದರ ಜೊತೆಗೆ ಒಂದು ತಿಂಗಳ ಪರ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಲು ಕಂಕಣಬದ್ಧರಾಗಬೇಕೆಂದು ತಿಳಿಸಿದರು.   

ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರಮಠ ಮಾತನಾಡಿ, ಶ್ರೀಮಠದಲ್ಲಿ ಎಲ್.ಕೆ.ಜಿ. ಯಿಂದ ಪಿಯುಸಿ, ಡಿಗ್ರಿ, ಐಟಿಐ, ಬಿಇಡಿ, ಸಂಸ್ಕೃತ ಶಾಲಾ – ಕಾಲೇಜುಗಳನ್ನು ಲಿಂ. ಶ್ರೀಗಳು ಪ್ರಾರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು. ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಿ ಈ ಭಾಗದ ನಡೆದಾಡುವ ದೇವರೆಂದೇ ಪ್ರಖ್ಯಾತಿ ಗಳಿಸಿದ್ದಾರೆ ಎಂದರು.

ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಅನೇಕ ಮಹತ್ತರ ಬದಲಾವಣೆಗಳನ್ನು ತರುವುದರ ಜೊತೆಗೆ ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಎಷ್ಟೋ ಪ್ರಕರಣಗಳನ್ನು ಶ್ರೀಮಠದಲ್ಲಿ ರಾಜೀ-ಪಂಚಾಯ್ತಿಗಳ ಮೂಲಕ ಬಗೆಹರಿಸಿ ಮಾದರಿ ಎನಿಸಿದ್ದರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಬಿ.ಎನ್. ಮೋಹನ್ ಕುಮಾರ್ ದಿಡಗೂರು ಸಾಹಿತ್ಯ ಮತ್ತು ಕಡದಕಟ್ಟೆ ತಿಮ್ಮಪ್ಪ ಅವರು ಹಾಡಿರುವ `ಸಂತಸವ ನೀಡೋ ಹನುಮ’ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು.

ಶ್ರೀ ಅಭಿನೇತ್ರಿ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಪಾಂಡಿಚೆರಿಯಲ್ಲಿ ನಡೆದ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  

ಪ್ರಧಾನ ಅರ್ಚಕ ಅನ್ನದಾನಯ್ಯ ಶಾಸ್ತ್ರಿ, ಶಿವಲಿಂಗಾರಾಧ್ಯ ಶಾಸ್ತ್ರಿ, ಬಸಪ್ಪ ಗೊಲ್ಲರಹಳ್ಳಿ, ಶ್ರೀ ಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ, ಶಾಲಾ-ಕಾಲೇಜುಗಳ ಮುಖ್ಯಸ್ಥರಾದ ಬಸವರಾಜ್ ಉಪ್ಪಿನ್,  ಎಚ್.ಎಂ. ಗುರುಪ್ರಕಾಶ್, ಎಂ.ಪಿ.ಎಂ. ಷಣ್ಮುಖಯ್ಯ, ಶಂಕರ್ ಸ್ವಾಮಿ, ಎ.ಕೆ. ರಾಮಚಂದ್ರಪ್ಪ, ಮಂಜಾನಾಯ್ಕ್, ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು.  

error: Content is protected !!