ಕುಂಬಳೂರಿನಲ್ಲಿ ನಾಡಿದ್ದು ಚಿಟ್ಟಕ್ಕಿ ಇಂಟರ್‌ನ್ಯಾಷನಲ್ ಶಾಲೆಯ ಸುಸಜ್ಜಿತ ಕಟ್ಟಡ ಲೋಕಾರ್ಪಣೆ

ಕುಂಬಳೂರಿನಲ್ಲಿ ನಾಡಿದ್ದು ಚಿಟ್ಟಕ್ಕಿ ಇಂಟರ್‌ನ್ಯಾಷನಲ್ ಶಾಲೆಯ ಸುಸಜ್ಜಿತ ಕಟ್ಟಡ ಲೋಕಾರ್ಪಣೆ

ತರಳಬಾಳು ಜಗದ್ಗುರುಗಳಿಂದ ನೂತನ ಕಟ್ಟಡ ಉದ್ಘಾಟನೆ

ಮಲೇಬೆನ್ನೂರು, ಮೇ 11- ಕುಂಬಳೂರು ಸಮೀಪ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮಲೇಬೆನ್ನೂರಿನ ಎಸ್.ಡಿ.ಎಲ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಚಿಟ್ಟಕ್ಕಿ ಇಂಟರ್‌ನ್ಯಾಷನಲ್ ಶಾಲೆಯ ನೂತನ ಕಟ್ಟಡವನ್ನು ಇದೇ ದಿನಾಂಕ 14ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಿರಿಗೆರೆ ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಚಿಟ್ಟಕ್ಕಿ ರಮೇಶ್ ತಿಳಿಸಿದ್ದಾರೆ.

ಅವರು ಗುರುವಾರ ಶಾಲೆಯ ನೂತನ ಕಟ್ಟಡದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅವರು ಆಗಮಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಜುಕೇಷನಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಚಿಟ್ಟಕ್ಕಿ ಬಸವರಾಜಪ್ಪ ವಹಿಸಲಿದ್ದು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಡಾ.ಕೆ.ಅರುಣ್, ಕರ್ನಾಟಕ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಹಯವದನ ಉಪಾಧ್ಯಾಯ, ಡಿಡಿಪಿಐ ಜಿ.ಆರ್.ತಿಪ್ಪೇಶಪ್ಪ, ಬಿಇಓ ಎಂ.ಹನುಮಂತಪ್ಪ ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  

ಉದ್ದೇಶ : ಈ ಭಾಗದಲ್ಲಿ ಸಿಬಿಎಸ್‌ಸಿ ಶಾಲೆ  ಕೊರತೆಯ ಹಿನ್ನೆಲೆಯಲ್ಲಿ ಮಕ್ಕಳನ್ನು ಓದಿಸುವುದ ಕ್ಕಾಗಿಯೇ ನಮ್ಮ ಭಾಗದ ರೈತರು ದಾವಣಗೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ನಾವು, ಭತ್ತದ ವ್ಯಾಪಾರದಲ್ಲಿ ನಮ್ಮನ್ನು ಬೆಳೆಸಿದ ಮಲೇಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ರೈತರ ಮಕ್ಕಳಿಗೆ ಅನುಕೂಲ ಮಾಡಬೇಕೆಂಬ ಉದ್ದೇಶದಿಂದ ಕುಂಬಳೂರು ಬಳಿ 4 ಎಕರೆ ಜಾಗ ಖರೀದಿಸಿ, ಸುಮಾರು 920 ಚದರ ಜಾಗದಲ್ಲಿ ಜಿ+3 ಮಾದರಿಯಲ್ಲಿ ಸುಸಜ್ಜಿತ ಶಾಲಾ ಕಟ್ಟಡವನ್ನು ಕಟ್ಟಿದ್ದೇವೆ. ಜೂನ್ 1 ರಿಂದ ಇಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗೆ ತರಗತಿಗಳು ಪ್ರಾರಂಭವಾಗಲಿದ್ದು, ಈಗಾಗಲೇ ನಾವು ನಿರೀಕ್ಷೆ ಮಾಡಿದಷ್ಟು ಮಕ್ಕಳನ್ನು ಇಲ್ಲಿಗೆ ಸೇರಿಸಲು ಪೋಷಕರು ಅರ್ಜಿ ಹಾಕಿದ್ದಾರೆ. ಈ ವರ್ಷ ಯಾವುದೇ ಡೊನೇಷನ್ ತೆಗೆದುಕೊಳ್ಳುವುದಿಲ್ಲ. ಶಾಲೆಯ ಕಲಿಕಾ ಶುಲ್ಕವನ್ನು ಮಾತ್ರ ಪಡೆಯಲಾಗುವುದು ಎಂದು ಅವರು ವಿವರಿಸಿದರು. 

ಎಸ್‌ಡಿಎಲ್ ಎಜುಕೇಷನಲ್ ಟ್ರಸ್ಟ್‌ನ ಆಡಳಿತಾಧಿಕಾರಿ ಎಸ್.ಕೆ.ಕುಮಾರ್ ಮಾತನಾಡಿ,  ಡಾ.ಗುರುರಾಜ ಕರ್ಜಗಿ ಅವರ ಮಾರ್ಗದರ್ಶನದಲ್ಲೇ ನಮ್ಮ ಶಾಲೆಯ ಶಿಕ್ಷಕರು ಮಕ್ಕಳಿಗೆ ಹೊಸ ಮಾದರಿಯಲ್ಲಿ ಕಲಿಕೆಯ ವಿಧಾನಗಳನ್ನು ಹೇಳಿಕೊಡಲಿದ್ದಾರೆ.

ನೈಪುಣ್ಯ ಹಾಗೂ ವಿಶೇಷ ಕೌಶಲ್ಯ ತರಬೇತಿಗಾಗಿ ಪ್ರತ್ಯೇಕ ಕೊಠಡಿಯನ್ನು ಮತ್ತು ಮಕ್ಕಳ ಆರೋಗ್ಯ ತಪಾಸಣೆಗಾಗಿ ಪ್ರತ್ಯೇಕ ಕೊಠಡಿಯನ್ನು ಮೀಸಲಿಟ್ಟಿದ್ದೇವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾಗಿ ಯೋಗ, ಸಂಗೀತ, ನೃತ್ಯ, ಕರಾಟೆಯನ್ನು ಕಲಿಸಲಾಗುವುದು. ಪ್ರತಿ ಕೊಠಡಿಯಲ್ಲಿ ಡಿಜಿಟಲ್ ಬೋರ್ಡ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು. ಶುದ್ಧ ನೀರಿನ ಘಟಕ, ಹೈಟೆಕ್ ಶೌಚಾಲಯ, ಫಿಜಿಕ್ಸ್ ಹಾಗೂ ಸೈನ್ಸ್ ಲ್ಯಾಬ್ ವಸ್ಥೆಯನ್ನು ಮಾಡಿದ್ದೇವೆ ಎಂದು ಕುಮಾರ್ ತಿಳಿಸಿದರು.

ಹತ್ತು ಸಾವಿರ ಪುಸ್ತಕಗಳ ವಿಶೇಷ ಗ್ರಂಥಾಲಯ ಕೊಠಡಿಯನ್ನು ಮಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುವುದು.

ನಂದಿ ಅಸೋಸಿಯೇಟ್ಸ್‌ನ ಬಿಸಲೇರಿ ಗಂಗಣ್ಣ ಮಾತನಾಡಿ, ಇದೇ ಮೊದಲ ಬಾರಿಗೆ ವಿಶೇಷ ವಿನ್ಯಾಸದ ಕಟ್ಟಡವನ್ನು ನಿರ್ಮಿಸಿದ್ದು, ಕಟ್ಟಡದ ಸುರಕ್ಷತೆಯ ದೃಷ್ಠಿಯಿಂದ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು. 

ಎಜುಕೇಷನಲ್ ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ಪುರಸಭೆ ಮಾಜಿ ಸದಸ್ಯ ಮಹಾಂತೇಶ್ ಸ್ವಾಮಿ, ಮಂಜು, ಜಿಗಳಿಯ ಕೆ.ಜಿ.ಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!