ಹರಿಹರ : 73.18 ಮತದಾನ

ಹರಿಹರ : 73.18 ಮತದಾನ

ಬಿಜೆಪಿಗೆ ಮತ ಹಾಕುವಂತೆ ಹೇಳಿದ ಸಿಬ್ಬಂದಿ 

ಹರಿಹರ, ಮೇ 10- ಕೆಲವೊಂದು ಮತಗಟ್ಟೆ ಕೇಂದ್ರಗಳಲ್ಲಿ ಸಣ್ಣ – ಪುಟ್ಟ ಗಲಾಟೆ ಹೊರತು ಪಡಿಸಿ, ಹರಿಹರ ತಾಲ್ಲೂಕಿನ 228 ಮತಗಟ್ಟೆ ಕೇಂದ್ರಗಳಲ್ಲಿ ಶಾಂತಿಯುತವಾಗಿ ಶೇ. 73.18 ರಷ್ಟು ಬಿರುಸಿನ ಮತದಾನ ನಡೆಯಿತು. ಹಲವಾರು ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುನ್ಮಾನ ಯಂತ್ರಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

10 ಗಂಟೆ ಸಮಯದಲ್ಲಿ ನಗರದ ಕುಂಬಾರ ಓಣಿ ಹತ್ತಿರದ ಮತಗಟ್ಟೆ 31 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಶಾರದಮ್ಮ ಎಂಬುವವರು ಬಿಜೆಪಿ ಪಕ್ಷಕ್ಕೆ ಮತವನ್ನು ಹಾಕುವಂತೆ ಹೇಳಿದರು ಎಂಬ ಕಾರಣದಿಂದಾಗಿ ಸ್ವಲ್ಪ ಸಮಯ ಮತಗಟ್ಟೆ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಆ ಸಮಯದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಶಿವಶಂಕರ್ ಸ್ಥಳಕ್ಕೆ ಆಗಮಿಸಿ, ಘಟನೆ ವಿಚಾರಗಳನ್ನು ತಹಶೀಲ್ದಾರ್ ಪೃಥ್ವಿ ಸಾನಿಕಂ, ಸಿಪಿಐ ದೇವಾನಂದ್, ಪಿಎಸ್ಐ ವೀಣಾ ಮಂಡ್ಯರವರ ಗಮನಕ್ಕೆ ತಂದರು. ತಹಶೀಲ್ದಾರ್‌ರವರು ತಕ್ಷಣವೇ ಸಿಬ್ಬಂದಿಯನ್ನು ಬದಲಾವಣೆ ಮಾಡಿದರು.

ನಗರದ ಬಹುತೇಕ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಸುಡುವ ಬಿಸಿಲಿನ ತಾಪವನ್ನು ಲೆಕ್ಕಿಸದೇ ಜನರು ಮತದಾನಕ್ಕೆ ಬಂದಿದ್ದರು. ಸಂಜೆ ನಾಲ್ಕು ಗಂಟೆಯ ಸಮಯದಲ್ಲಿ ಅರ್ಧ ಗಂಟೆ ಕಾಲ ದಿಢೀರ್ ಮಳೆ ಸುರಿಯಿತು.

ನಗರದ ಜಿ.ಬಿ.ಎಂ.ಎಸ್ ಶಾಲೆಯ ಬೂತ್ ನಂ. 51 ರಲ್ಲಿ ಮಳೆ ಬೀಳುವ ಸಮಯದಲ್ಲಿ ವಿದ್ಯುತ್ ಕಡಿತವಾಗಿತ್ತು. ಆಗ ಬೂತ್ ಏಜೆಂಟ್ ಒಬ್ಬರು, ಒಂದು ಪಕ್ಷದವರಿಗೆ ಮಾತ್ರ ಮೊಬೈಲ್ ಟಾರ್ಚ್ ಹಾಕಿದ್ದಾರೆ ಎಂದು ಗಲಾಟೆ ನಡೆಯಿತು. ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಾಗ ದಾವಣಗೆರೆ ಡಿವೈಎಸ್ಪಿ ಕನ್ನಿಕಾ ಸಕ್ರಿವಾಲ್ ಮತ್ತು ಸಿಪಿಐ ದೇವಾನಂದ್ ಆಗಮಿಸಿ, ಗಲಾಟೆ ತಹಬಂದಿಗೆ ತಂದರು.

 ಡಿ.ಆರ್.ಎಂ. ಶಾಲಾ ಕೊಠಡಿಯಲ್ಲಿ ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಶಿವಶಂಕರ್, ತಾಲ್ಲೂಕಿನ ಬೂದಿಹಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್ ಮತ್ತು ಸರ್ಕಾರಿ ಶಾಲಾ ಕೊಠಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ತಮ್ಮ ಮತದಾನ ಮಾಡಿದರು.

ಮತದಾನ ಪೂರ್ಣಗೊಂಡ ನಂತರ, ಮತ ಯಂತ್ರಗಳನ್ನು ನಗರದ ಸೆಂಟ್ ಮೇರಿಸ್ ಶಾಲೆ ಆವರಣಕ್ಕೆ ತರಲಾಯಿತು.

ಕೆಲವೊಂದು ಮತಗಟ್ಟೆ ಕೇಂದ್ರದಲ್ಲಿ ಸರಿಯಾದ ರೀತಿಯಲ್ಲಿ ಸೌಲಭ್ಯಗಳು ಇರದೇ ಇರುವುದು ಮತ್ತು ವೃದ್ಧರು ಮತಗಟ್ಟೆ ಕೇಂದ್ರಕ್ಕೆ ಹೋಗುವಾಗ ವ್ಹೀಲ್ ಚೇರ್ ಕಡಿಮೆ ಸಂಖ್ಯೆಯಲ್ಲಿ ಇದ್ದುದ್ದು, ನೀರಿನ ವ್ಯವಸ್ಥೆ ಇಲ್ಲದಿರುವುದು ಕಂಡು ಬಂತು.

error: Content is protected !!