ಎಂ.ಪಿ.ಪ್ರಕಾಶ್‌ ಹಿರಿಯ ಪುತ್ರಿ ಲತಾ ನಾಮಪತ್ರ ಸಲ್ಲಿಕೆ

ಎಂ.ಪಿ.ಪ್ರಕಾಶ್‌ ಹಿರಿಯ ಪುತ್ರಿ ಲತಾ ನಾಮಪತ್ರ ಸಲ್ಲಿಕೆ

ಹರಪನಹಳ್ಳಿ, ಏ. 18- ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್‌ ಅವರ ಹಿರಿಯ ಪುತ್ರಿ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಅವರು ಇಂದು ನಾಮಪತ್ರ ಸಲ್ಲಿಸಿದರು.

ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಹಾಗೂ ಐತಿಹಾಸಿಕ ಶ್ರೀ ಕೋಟೆ ಆಂಜನೇಯ ದೇವಸ್ಥಾನಕ್ಕೆ ತೆರಳಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು,  ತೆರೆದ ವಾಹನದ ಮೂಲಕ ತಾಲ್ಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿ ಟಿ.ವಿ. ಪ್ರಕಾಶ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲತಾ, ಕಳೆದ ನಾಲ್ಕು ವರ್ಷಗಳಿಂದ ಹರಪನಹಳ್ಳಿ ಕ್ಷೇತ್ರದಾದ್ಯಂತ ತಿರುಗಾಡಿ ಪಕ್ಷ ಕಟ್ಟಿದ್ದೇನೆ. ಕೆಲಸಕ್ಕೆ ಕೂಲಿ ಕೇಳಿದ್ದೆ, ನನಗೆ ಕೂಲಿ ಕೊಡಲಿಲ್ಲ. ಎಲ್ಲರಿಗಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಕೆಲಸ ಮಾಡಿದ್ದರೂ ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಬಂದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಅಕ್ಕ-ತಂಗಿಯರು ನಿಂತಿದ್ದೀರಿ? ಎಂಬ ಪತ್ರಕರ್ತರ ಪ್ರಶ್ನೆಗೆ ಕೊಟ್ಟ ಹೆಣ್ಣು ಕುಲದ ಹೊರಗೆ. ಅವರೇ ಬೇರೆ, ನಾವೇ ಬೇರೆ. ಒಂದೇ ಕುಟುಂಬದಲ್ಲಿ ಅಣ್ಣ – ತಮ್ಮ, ತಂದೆ-ಮಕ್ಕಳು ನಿಲ್ಲುವುದು ಸಹಜ. ಅದರಲ್ಲೇನು ವಿಶೇಷತೆ ಇಲ್ಲ ಎಂದು ಲತಾ ಪ್ರತಿಕ್ರಿಯಿಸಿದರು.

ಈ ವೇಳೆ ತಾ.ಪಂ. ಮಾಜಿ ಅಧ್ಯಕ್ಷ ಹಿರೇಮೇಗಳಗೆರೆ ಲಕ್ಕಳ್ಳಿ ಹನುಮಂತಪ್ಪ, ಪುರಸಭೆ ಸದಸ್ಯರುಗಳಾದ ಎಂ.ವಿ. ಅಂಜಿನಪ್ಪ, ಟಿ. ವೆಂಕಟೇಶ, ಡಿ. ಅಬ್ದುಲ್ ರಹಿಮಾನ್‌, ಗೊಂಗಡಿ ನಾಗರಾಜ, ಲಾಟಿ ದಾದಾಪೀರ್, ಹೆಚ್. ಕೊಟ್ರೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಂ. ಬಸವರಾಜಯ್ಯ, ಮುಖಂಡರಾದ ಕೆ. ಚಂದ್ರೇಗೌಡ, ಬಿ.ಕೆ. ಪ್ರಕಾಶ, ಹೆಚ್.ಎಂ. ಮಲ್ಲಿಕಾರ್ಜುನಯ್ಯ, ಹೆಚ್.ಎಂ.ಕೊಟ್ರಯ್ಯ, ಮುದಗಲ್ ಗುರುನಾಥ, ಬಾಣದ ಅಂಜಿನಪ್ಪ, ಟಿ. ಉಮಾಕಾಂತ, ಚಿಕ್ಕೇರಿ ಬಸಪ್ಪ, ರೈತ ಸಂಘದ ಹೆಚ್.ಎಂ. ಮಹೇಶ್ವರಸ್ವಾಮಿ, ಹೆಚ್. ವಸಂತಪ್ಪ, ತೆಲಿಗಿ ಜಿಬಿಟಿ ಮಹೇಶ, ಓ. ರಾಮಣ್ಣ, ಬಸಾಪುರದ ಮಂಜುನಾಥ, ಮತ್ತೂರು ಬಸವರಾಜ, ರವಿಶಂಕರ್, ಜಟ್ಟೆಪ್ಪರ ಮಂಜುನಾಥ, ಕಂಚಿಕೇರಿ ಜಯಲಕ್ಷ್ಮಿ, ಗುಂಡಗತ್ತಿ ನೇತ್ರಾವತಿ, ಹೆಚ್.ಟಿ. ವನಜಾಕ್ಷಿ, ಗೊಂಗಡಿ ಸಹನ, ಉಮಾ ಶಂಕರ್, ಕವಿತ ಸುರೇಶ್, ಭಾಗ್ಯಮ್ಮ, ನಂದಿಬೇವೂರು ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!