ಚಿಂತಕ ಪ್ರೊ. ರಾಮಚಂದ್ರಪ್ಪ
ದಾವಣಗೆರೆ, ಏ. 18- ಭಾರತಕ್ಕೆ ಜಾಗತಿಕ ಮಾನ್ಯತೆ ಇದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಅಂಬೇಡ್ಕರ್ ಮತ್ತು ಅವರು ನೀಡಿದ ಸಂವಿಧಾನದ ಫಲದಿಂದಲೇ ಹೊರತು, ಯಾವುದೇ ಒಬ್ಬ ರಾಜಕಾರಣಿ, ಒಂದು ಸರ್ಕಾರದಿಂದ ಅಲ್ಲ ಎಂಬುದನ್ನು ಮನಗಾಣಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಎ.ಬಿ. ರಾಮಚಂದ್ರಪ್ಪ ಹೇಳಿದರು.
ಇಲ್ಲಿನ ಕೆಟಿಜೆ ನಗರದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಯುವ ಸ್ನೇಹ ಬಳಗ, ಸ್ವರ ಸಮ್ಮಿಲನ ಹಾಗೂ ರಂಗ ಅನಿಕೇತನ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಬ್ಬ ಹಾಗೂ `ಬೆಳಕು ಹಂಚಿದ ಬಾಲಕ’ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎರಡು ಸಾವಿರ ವರ್ಷಗಳಿಂದ ನಿರಂತರವಾಗಿ ದಾಸ್ಯಕ್ಕೆ ಈಡಾಗಿದ್ದ ಸಮುದಾಯಗಳ ವಿಮೋಚನೆ, ಮಹಿಳೆಯರು, ಕಾರ್ಮಿಕರ ವಿಮೋಚನೆಯನ್ನು ಸಂವಿ ಧಾನದ ಮೂಲಕ ಸಾಕಾರಗೊಳಿಸಿದರು. ಇಂದು ಭಾರತ ಸಾರ್ವಭೌಮತ್ವ, ಭ್ರಾತೃತ್ವ, ಸೋದರತೆ, ಮಾನವೀಯತೆ ಯಿಂದ ಪ್ರಕಾಶಿಸುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಅಂಬೇಡ್ಕರ್ ಎಂಬದನ್ನು ಮರೆಯಬಾರದು ಎಂದರು.
ರಾಜಕೀಯದಲ್ಲಿ ಧರ್ಮ ಬೆರೆಸಬಾರದು. ಒಂದು ವೇಳೆ ಇದು ಸಾಧ್ಯವಾದರೆ ಸನಾತನವಾದಿಗಳು, ಕೋಮುವಾದಿ ಗಳು ಧರ್ಮಾಂಧರು ಹೆಚ್ಚಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವರು. ಮೌಢ್ಯ ಹೆಚ್ಚಾಗುತ್ತದೆ ಎಂದು ಅಂದೇ ಎಚ್ಚರಿಸಿದ್ದರು.
ರಾಜಕೀಯ ಮತ್ತು ಧರ್ಮದ ಅನೈತಿಕ ಸಂಬಂಧದಿಂದಾಗಿ ಸ್ವಾತಂತ್ರ್ಯ, ಸಮಾ ನತೆಗಳು ಅಪಾಯಕ್ಕೆ ಸಿಲುಕಿವೆ ಎಂದು ವಿಷಾದಿಸಿದರು.
ಅಂಬೇಡ್ಕರ್ ಜಯಂತಿ ಎಂದರೆ ಬಹುಜನರ
ಹಕ್ಕಿನ ಉದಯದ ದಿನವೂ ಹೌದು. ಮೇಲ್ಜಾತಿಗಳ ಮನಪರಿವರ್ತನೆಯ ದಿನವೂ ಹೌದು. ಅಂಬೇಡ್ಕರ್ ಜಯಂತಿ ಕೇವಲ ಆಚರಣೆ ಮಾತ್ರವಲ್ಲ, ಶೋಷಿತರ ಜಾಗೃತಿಯ ದಿನ ಎಂಬುದನ್ನು ಅರಿಯಬೇಕಿದೆ. ಇಂತಹ ಮಹತ್ವದ ಜಯಂತಿಯನ್ನು ಸರ್ಕಾರ ಕೈಬಿಟ್ಟಿರುವುದನ್ನು ಯಾರೂ ಸಮ್ಮತಿಸಲಾರರು. ಸರ್ಕಾರದ ಈ ನಡೆಯನ್ನು ವಿರೋಧಿಸಿದರು.
ಸತತ ಪರಿಶ್ರಮ, ಅಧ್ಯಯನದಿಂದ ನಿರ್ದಿಷ್ಟ ಗುರಿ ಸಾಧನೆ ಸಾಧ್ಯ. ಮಕ್ಕಳ ಶಿಕ್ಷಣದ ಬಗ್ಗೆ ಗಂಭೀರ ಚಿಂತನೆ ಅತ್ಯಗತ್ಯ ಎಂದು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗದ ನಿಕಟಪೂರ್ವ ನ್ಯಾಯಾಧೀಶರಾದ ಸುನಂದ ದುರುಗೇಶ್ ಹೇಳಿದರು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಜನಪರ ಕೆಲಸ ಮಾಡುವಂತಹ ಸೂಕ್ತ ವ್ಯಕ್ತಿಗೆ ಮತ ಹಾಕುವಂತೆ ಮನವಿ ಮಾಡಿದರು.
ರಂಗ ನಿರ್ದೇಶಕ ದೇವರಾಜ್ ಮಳೇಹಳ್ಳಿ ಮಾತ ನಾಡಿದರು. ದಲಿತ ಮುಖಂಡರಾದ ಸೋಮಲಾಪುರದ ಹನುಮಂತಪ್ಪ, ವಕೀಲರಾದ ಹೆಚ್.ಎನ್. ಸುಧಾ, ರಮೇಶ್ ಕುಷ್ಟಗಿ, ಹೆಚ್. ದುರುಗೇಶ್ ಗುಡಿಗೇರಿ, ನಾಗೇಂದ್ರ ಬಂಡೀಕರ್ ಮತ್ತಿತರರು ಉಪಸ್ಥಿತರಿದ್ದರು.
ಸ್ವರ ಸಮ್ಮಿಲನ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ರಂಗ ಅನಿಕೇತನ ಶಿಬಿರದ ಮಕ್ಕಳಿಂದ `ಬೆಳಕು ಹಂಚಿದ ಬಾಲಕ’ ನಾಟಕ ಪ್ರದರ್ಶನಗೊಂಡಿತು.