ರೈತರ ಜಮೀನು ವಶಪಡಿಸಿಕೊಂಡಾಗ ನಿರಂತರ ಆದಾಯ ಕೊಡುವ ವ್ಯವಸ್ಥೆ ಬೇಕು
ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ
ಕೊಟ್ಟೂರು, ಜ. 31 – ಯಾವ ಸರ್ಕಾರ ಪುಕ್ಕಟೆ ದಂಧೆ ಶುರು ಮಾಡುತ್ತದೆಯೋ ಅದು ರೈತ ವಿರೋಧಿ. ಪುಕ್ಕಟೆ ಯೋಜನೆಗಳಿಂದಾಗಿ ಕೃಷಿಗೆ ಕೂಲಿ ಕಾರ್ಮಿಕರು ಸಿಗದೇ ಸಮಸ್ಯೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ನಾಲ್ಕನೇ ದಿನದಂದು ಆಯೋಜಿಸಲಾಗಿದ್ದ ಕೃಷಿಕರ ಚಿಂತನಾ ಗೋಷ್ಠಿಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪುಕ್ಕಟೆ ಅಕ್ಕಿ, ಪುಕ್ಕಟೆ ಗೋಧಿ, ಪುಕ್ಕಟೆ ನೀರು ಹೀಗೆ ಪುಕ್ಕಟೆ ಕೊಡುತ್ತಾ ಹೋಗುವುದರಿಂದ ಜನರು ಕೂಲಿ ಕೆಲಸಕ್ಕೆ ಸಿಗುವುದಿಲ್ಲ. ರೈತರು ಈಗ ಮನೆ ಮಕ್ಕಳಿಗಿಂತ ಕೂಲಿ ಕಾರ್ಮಿಕರಿಗೆ ದಪ್ಪಯ್ಯ ಎನ್ನುವ ಪರಿಸ್ಥಿತಿ ಬಂದಿದೆ ಎಂದವರು ಹೇಳಿದರು.
ಇತ್ತೀಚೆಗೆ ಒಬ್ಬ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ಪಡಿತರಲ್ಲಿ ಕೊಡಲಾಗುತ್ತಿದೆ. ಇಷ್ಟೊಂದು ಅಕ್ಕಿ ನಮಗೆ ಬೇಡ ಎಂದು, ಅಕ್ಕಿಯನ್ನು ಮಾರಿಕೊಂಡು ಹಣ ಪಡೆಯುತ್ತಿದ್ದಾರೆ. ಹೀಗೆ ಸುಲಭವಾಗಿ ಹಣ ಸಿಗುವುದರಿಂದ ಕೆಲಸಕ್ಕೆ ಜನ ಬರುತ್ತಿಲ್ಲ. ರೈತರ ಬಾಳುವೆ ಸರಿ ಆಗುತ್ತಿಲ್ಲ ಎಂದರು.
ನಾನೂ ಸಹ ಕೃಷಿಕನೇ. ಹೀಗಾಗಿ ನನಗೆ ರೈತರ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ನನಗೆ ವಿಧಾನಸೌಧದಿಂದ ಫೋನ್ ಬಂದರೆ ಏನೂ ಅನ್ನಿಸುವುದಿಲ್ಲ. ಆದರೆ, ಹೊಲದಿಂದ ಫೋನ್ ಬಂದರೆ, ಯಾವ ಕೆಲಸದವನು ಬರಲಿಲ್ಲವೋ – ಹೊಲದಲ್ಲಿ ಏನಾಯಿತೋ ಎಂಬ ಕಳವಳ ಉಂಟಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ರಾಜ್ಯದಲ್ಲಿ 4 ಕೋಟಿ ಕೃಷಿ ಅವಲಂಬಿತರಿದ್ದಾರೆ. ಕೃಷಿಯಲ್ಲಿ ನಾವೆಲ್ಲರೂ 30 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿದ್ದೇವೆ. ಕೇವಲ ನೇಗಿಲು ಕುಳ ಒಂದಕ್ಕೆ ರಾಜ್ಯದ ರೈತರು 50 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಇಷ್ಟು ದೊಡ್ಡ ಪ್ರಮಾಣದ ಹೂಡಿಕೆ ಮಾಡುವ ನಮ್ಮ ಬಗ್ಗೆ ಸರ್ಕಾರ ಸರಿಯಾದ ಕಾಳಜಿ ತೋರಿಸುತ್ತಿಲ್ಲ. ವಿಶ್ವವಿದ್ಯಾಲಯಗಳು ಈ ಹೂಡಿಕೆ ಗುರುತಿಸುತ್ತಿಲ್ಲ ಎಂದರು.
ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ, ನಟ ಕೆ. ಸುಚೇಂದ್ರ ಪ್ರಸಾದ್, ಶಿವಮೊಗ್ಗ ಕೃಷಿ ವಿ.ವಿ. ಕುಲಪತಿ ಪ್ರೊ. ಆರ್.ಸಿ. ಜಗದೀಶ್, ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಬೆಂಗಳೂರಿನ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕ ಡಾ. ಡಿ.ಕೆ. ಪ್ರಭುರಾಜ್, ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಎಂ.ಜಿ. ಬಸವನಗೌಡ, ಮಾಜಿ ಶಾಸಕ ಯು.ಬಿ. ಬಣಕಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.