ಮಲೇಬೆನ್ನೂರು, ಫೆ.1- ಈ ಬಾರಿ ಜೆಡಿಎಸ್ ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದರು.
ಅವರು ಬುಧವಾರ ಮಲೇ ಬೆನ್ನೂರಿಗೆ ಪಂಚರತ್ನ ರಥಯಾತ್ರೆ ಮೂಲಕ ಆಗಮಿಸಿ ಪಟ್ಟಣದ ಮುಖ್ಯ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾದೇಶಿಕ ಪಕ್ಷವನ್ನು ಅಧಿಕಾರ ಕ್ಕೆ ತಂದರೆ ನಿಮ್ಮ ರಾಜ್ಯದ ಅಧಿಕಾರ ನಿಮ್ಮ ಕೈಯ್ಯಲ್ಲಿರುತ್ತದೆ. ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸಿದರೆ ನಮ್ಮ ರಾಜ್ಯಕ್ಕೆ ಯಾವುದೇ ಪ್ರಯೋಜನ ವಿಲ್ಲ. ನಮ್ಮ ಜನರ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡುವ ಬಿಜೆಪಿ ಯನ್ನು ಇನ್ನೆಂದೂ ಬೆಂಬಲಿಸಬೇಡಿ ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ಗೆ ಅಧಿಕಾರ ನೀಡಿದರೆ ನಾಡು ಸಮೃದ್ಧಿಯಾಗಿ ರುತ್ತದೆ. ನಾಡಿನ ಜನರ ಭಾವನೆಗಳಿಗೆ ಪೂರಕ ವಾಗಿ ಅಧಿಕಾರ ನಡೆಸಿದ ಅನುಭವ ನನಗಿದೆ. ಹಾಗಾಗಿ ಈ ಬಾರಿ ಯಾದರೂ ನಮಗೆೆ ಸ್ವತಂತ್ರವಾಗಿ ಅಧಿಕಾರಿ ಕೊಡಿ ಎಂದು ಪ್ರಾರ್ಥಿಸಿದ ಕುಮಾರಸ್ವಾಮಿ ಅವರು ಶಿವಶಂಕರ್ ಅವರನ್ನು ಬಹುಮತದೊಂದಿಗೆ ಗೆಲ್ಲಿಸಿ ಎಂದರು. ನಾವು ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಎಲ್ಲಾ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದರ ಜೊತೆಗೆ ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಅಸಹಾಯಕರ ಎಲ್ಲಾ ವೇತನಗಳನ್ನು ಏರಿಕೆ ಮಾಡುವುದಾಗಿ ಕುಮಾರ ಸ್ವಾಮಿ ಭರವಸೆ ನೀಡಿದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಬೈರನಪಾದ ಏತ ನೀರಾವರಿ ಯೋಜನೆ ಕಥೆಯಾಗಿ ಉಳಿದಿದೆ. ಕೊಮಾರನಹಳ್ಳಿ ಕಥೆಯಾಗಿ ಉಳಿದಿದೆ. ಕೊಮಾರನಹಳ್ಳಿ ಕೆರೆಗೆ ನೀರು ಹರಿಸುತ್ತೇವೆಂದು ಸುಳ್ಳು ಹೇಳುವವರನ್ನು ನಂಬಬೇಡಿ.
ಹರಿಹರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನನ್ನ ಕನಸಾಗಿದ್ದು, ಅದನ್ನು ನನಸು ಮಾಡಲು ನನಗೆ ಮತ ನೀಡಿ ಗೆಲ್ಲಿಸಿ ಎಂದು ಕೋರಿದರು.
ಹಿಜಾಬ್ ಸೇರಿದಂತೆ ಅಲ್ಪಸಂಖ್ಯಾತರ ಭಾವನೆಗಳಿಗೆ ದಕ್ಕೆ ಉಂಟುಮಾಡುವ ಯಾವುದೇ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಬಿಜೆಪಿ, ಕಾಂಗ್ರೆಸ್ನ ಮೋಸದ ಆಟಗಳನ್ನು ಜನ ನೋಡುವ ಕಾಲ ಮುಗಿಯಿತು ಎಂದು ಶಿವಶಂಕರ್ ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಭೋಜೆಗೌಡ, ಕೆ.ಎಸ್. ರಮೇಶ್ಗೌಡ, ಮಾಜಿ ಶಾಸಕ ಚೌಡರೆಡ್ಡಿ, ಜೆಡಿಎಸ್ ಯುವ ಮುಖಂಡರಾದ ಹೆಚ್.ಎಸ್. ಅರವಿಂದ್, ತುಳಸಿರಾಮ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಹರಿಹರ ತಾ. ಗ್ರಾ. ಜೆಡಿಎಸ್ ಅಧ್ಯಕ್ಷ ಹಳ್ಳಿಹಾಳ್ ಪರಮೇಶ್ವರಪ್ಪ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ, ಹಿಂಡಸಘಟ್ಟಿ ಮುರುಗೇಶ್, ಬಂಡೇರ ತಿಮ್ಮಣ್ಣ, ಸಿರಿಗೆರೆ ಪರಮೇಶ್ವರಗೌಡ, ನಂದಿತಾವರೆ ರಾಜು, ಮುಖಂಡರಾದ ಎಂ.ಬಿ. ಗುಲ್ಜಾರ್, ಸಿ. ಅಬ್ದುಲ್ ಹಾದಿ, ಗೋವಿಂದಪ್ಪ, ಸಾವಜ್ಜಿ, ಎಂ.ಆರ್. ಮಹಾದೇವಪ್ಪ, ಯೂಸೂಫ್ ಖಾನ್, ಆದಾಪುರ ವಿಜಯಕುಮಾರ್, ನಿಟ್ಟೂರಿನ ಕೆ. ಸಂಜೀವಮೂರ್ತಿ, ಎನ್.ಜಿ. ಬಸವನಗೌಡ, ಜಿಗಳಿಯ ಗೌಡ್ರ ಬಸವರಾಜಪ್ಪ, ಕೆ.ಆರ್. ರಂಗಪ್ಪ, ಡಾ. ಎನ್. ನಾಗರಾಜ್, ಎಕ್ಕೆಗೊಂದಿ ರುದ್ರಗೌಡ, ಎಂ.ವಿ. ನಾಗರಾಜ್, ಪಿ. ಜಯ್ಯಣ್ಣ, ಕುರುವ ಮಂಜುನಾಥ್, ಯಲವಟ್ಟಿಯ ಕೆ. ನರಸಪ್ಪ, ಎ. ರಾಮಚಂದ್ರಪ್ಪ, ರವಿನಾಯ್ಕ, ನಂದಿಗಾವಿ ರಾಜಣ್ಣ, ಕೊಕ್ಕನೂರಿನ ಆಂಜನೇಯ ಪಾಟೀಲ್, ಕುಂಬಳೂರಿನ ರಾಮಣ್ಣ, ಕಲ್ಲೇಶ್, ಹೆಚ್. ನಿಂಗಪ್ಪ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.
ಭರ್ಜರಿ ಸ್ವಾಗತ : ಪಟ್ಟಣಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರನ್ನು ನೂರಾರು ಮಹಿಳೆಯರು ಪೂರ್ಣಕುಂಭ ಮೇಳದೊಂದಿಗೆ ಸ್ವಾಗತಿಸಿದರು.
ವಿವಿಧ ಕಲಾ ಮೇಳಗಳು ಮೆರವಣಿಗೆಗೆ ಮೆರಗು ತಂದವು.
ದರ್ಗಾ ಕ್ರಾಸ್ ಬಳಿ ಜೆಸಿಬಿ ಮೂಲಕ ಕುಮಾರಸ್ವಾಮಿ, ಶಿವಶಂಕರ್ ಅವರಿಗೆ ಪುಷ್ಪಾರ್ಚನೆ ಮಾಡಿ ಗಮನ ಸೆಳೆದರು.
ಬುಧವಾರ ಬೆಳಿಗ್ಗೆ ಬನ್ನಿಕೋಡು ಗ್ರಾಮದಿಂದ ಆರಂಭವಾದ ಪಂಚರತ್ನ ರಥಯಾತ್ರೆ ಕೆ. ಬೇವಿನಹಳ್ಳಿ, ಮಿಟ್ಲಕಟ್ಟೆ, ದೇವರಬೆಳಕೆರೆ, ಕುಣೆಬೆಳಕೆರೆ, ಬೂದಿಹಾಳ್, ನಿಟ್ಟೂರು ಮಾರ್ಗವಾಗಿ ಮಲೇಬೆನ್ನೂರಿಗೆ ಆಗಮಿಸಿ ಇಲ್ಲಿಂದ ಕುಂಬಳೂರು, ಜಿಗಳಿ, ಜಿ. ಬೇವಿನಹಳ್ಳಿ, ಹಳ್ಳಿಹಾಳ್, ಕೊಕ್ಕನೂರು, ಹಿಂಡಸಘಟ್ಟ, ಗೋವಿನಹಾಳ್, ನಂದಿಗುಡಿ, ವಾಸನ, ಕೆ.ಎನ್. ಹಳ್ಳಿ, ಸಿರಿಗೆರೆ ಮಾರ್ಗವಾಗಿ ಹರಿಹರಕ್ಕೆ ತೆರಳಿದರು.
ಈ ಎಲ್ಲಾ ಗ್ರಾಮಗಳಲ್ಲಿ ಕುಮಾರಸ್ವಾಮಿ ಹಾಗೂ ಶಿವಶಂಕರ್ ಅವರಿಗೆ ಅಭೂತಪೂರ್ವ ಸ್ವಾಗತ ನೀಡಿ, ಬೀಳ್ಕೊಟ್ಟರು.
ಎಲ್ಲಾ ಕಡೆ ಕುಮಾರಸ್ವಾಮಿ ಅವರು ಕಾರಿನಲ್ಲಿಯೇ ನಿಂತು ಹಾರ-ಶಾಲು ಸ್ವೀಕರಿಸಿ, ಅಭಿಮಾನಿಗಳತ್ತ ಕೈ ಬೀಸಿ ಬೆಂಬಲ ತೋರಿದರು.